ವಿಶ್ವಸಂಸ್ಥೆ: ಗಾಜಾ ಮೇಲಿನ ಇಸ್ರೇಲ್ ದಾಳಿ ಕುರಿತಂತೆ ವಿಶ್ವಸಂಸ್ಥೆ ಇಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಯುದ್ಧ ಆರಂಭವಾಗಿ 30 ದಿನಗಳಾಯ್ತು.. ದಯವಿಟ್ಟು ಯುದ್ಧ ಸಾಕು ಮಾಡಿ.. ಕದನ ವಿರಾಮ ಘೋಷಣೆ ಮಾಡಿ ಎಂದು ಇಸ್ರೇಲ್ ಗೆ ವಿಶ್ವಸಂಸ್ಥೆ ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಎಲ್ಲಾ ಏಜೆನ್ಸಿಗಳ ಮುಖ್ಯಸ್ಥರು ಭಾನುವಾರ ಅಪರೂಪದ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗಾಜಾದಲ್ಲಿ ನಾಗರಿಕರ ಸಾವಿನ ಸಂಖ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ "ತಕ್ಷಣದ ಮಾನವೀಯ ಕದನ ವಿರಾಮ" ಕ್ಕೆ ಅವರು ಕರೆ ನೀಡಿದ್ದಾರೆ. "ಸುಮಾರು ಒಂದು ತಿಂಗಳಿನಿಂದ, ಪ್ರಪಂಚವು ಇಸ್ರೇಲ್ ಮತ್ತು ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರಾಂತ್ಯದಲ್ಲಿ ಸಂಭವಿಸುತ್ತಿರುವ ಪರಿಸ್ಥಿತಿಯನ್ನು ಆಘಾತ ನೋಡುತ್ತಿದ್ದು, ಭಯಾನಕ ಸಂಖ್ಯೆಗಳಲ್ಲಿ ಜೀವಹಾನಿಯಾಗಿದೆ ಎಂದು ವಿಶ್ವಸಂಸ್ಥೆ ಏಜೆನ್ಸಿಗಳ ಮುಖ್ಯಸ್ಥರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಯುನಿಸೆಫ್, ವಿಶ್ವ ಆಹಾರ ಕಾರ್ಯಕ್ರಮ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ 18 ಸಂಸ್ಥೆಗಳ ಮುಖ್ಯಸ್ಥರು ಈ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಅಕ್ಟೋಬರ್ 7 ರಂದು ಗಾಜಾದಿಂದ ಇಸ್ರೇಲ್‌ಗೆ ಹಮಾಸ್ ಗಡಿಯಾಚೆಗಿನ ದಾಳಿಯ ನಂತರ ಎರಡೂ ಕಡೆಗಳಲ್ಲಿ ಭೀಕರವಾದ ಸಾವಿನ ಸಂಖ್ಯೆ ಏರಿಕೆ ಅಂಕಿಅಂಶಗಳನ್ನು ತೆರೆದಿಟ್ಟರು. ಈ ಯುದ್ಧ ಸುಮಾರು 1,400 ಜನರನ್ನು ಬಲಿ ತೆಗೆದುಕೊಂಡಿದ್ದು, ಮುಖ್ಯವಾಗಿ ನಾಗರಿಕರು, ಮಕ್ಕಳು, ಹೆಂಗಸರು ಸಾವಿಗೀಡಾಗಿದ್ದಾರೆ ಎಂದು ಹೇಳಿದೆ.
ಅಂತೆಯೇ ಇಸ್ರೇಲ್ ಪಟ್ಟುಬಿಡದೆ ವಾಯು ಮತ್ತು ಫಿರಂಗಿ ದಾಳಿಗಳಿಂದ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಇದರಿಂದ ಕನಿಷ್ಠ 9,770 ಜನರು ಸಾವಿಗೀಡಾಗಿದ್ದಾರೆ. ಇಡೀ ಜನಸಂಖ್ಯೆಯು ಮುತ್ತಿಗೆ ಹಾಕಲ್ಪಟ್ಟಿದೆ ಮತ್ತು ದಾಳಿಗೆ ಒಳಗಾಗಿದೆ, ಉಳಿವಿಗಾಗಿ ಅಗತ್ಯ ವಸ್ತುಗಳ ಪ್ರವೇಶವನ್ನು ನಿರಾಕರಿಸಲಾಗಿದೆ, ಅವರ ಮನೆಗಳು, ಆಶ್ರಯಗಳು, ಆಸ್ಪತ್ರೆಗಳು ಮತ್ತು ಪೂಜಾ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಲಾಗಿದೆ. ಇದು ಸ್ವೀಕಾರಾರ್ಹವಲ್ಲ ಎಂದು ವಿಶ್ವಸಂಸ್ಥೆಯ ಎಜೆನ್ಸಿಗಳ ಮುಖ್ಯಸ್ಥರು ಹೇಳಿದ್ದಾರೆ.
ಹಮಾಸ್ ತನ್ನ ದಾಳಿ ವೇಳೆ ತೆಗೆದುಕೊಂಡ ಹೋದ 240 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಅದು ಕರೆ ನೀಡಿದ್ದು, ಯುದ್ಧವು ಉಲ್ಬಣಗೊಳ್ಳುತ್ತಿರುವಾಗ ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಗೌರವಿಸುವಂತೆ ಎರಡೂ ಕಡೆಯವರನ್ನು ವಿಶ್ವಸಂಸ್ಥೆಯ ಎಜೆನ್ಸಿಗಳ ಮುಖ್ಯಸ್ಥರು ಒತ್ತಾಯಿಸಿದ್ದಾರೆ. ಗಾಜಾಕ್ಕೆ ಹೆಚ್ಚಿನ ಆಹಾರ, ನೀರು, ಔಷಧ ಮತ್ತು ಇಂಧನವನ್ನು ಅನುಮತಿಸಬೇಕು. ನಮಗೆ ತಕ್ಷಣದ ಮಾನವೀಯ ಕದನ ವಿರಾಮದ ಅಗತ್ಯವಿದೆ. ಈಗಾಗಲೇ 30 ದಿನಗಳ ಕಳೆದು ಹೋಗಿದೆ. ಇನ್ನು ಸಾಕು.. ಸಾಕಷ್ಟು ಸಾವು-ನೋವುಗಳಾಗಿವೆ. ಇದು ಈಗ ನಿಲ್ಲಬೇಕು ಎಂದು ವಿಶ್ವಸಂಸ್ಥೆಯ ಎಜೆನ್ಸಿಗಳ ಮುಖ್ಯಸ್ಥರು ಹೇಳಿದ್ದಾರೆ.