ನವದೆಹಲಿ: ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಕೆ ಮಾಡಿದ ಕಾರಣದಿಂದಾಗಿ ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತ ಪ್ರಕರಣಗಳಲ್ಲಿ ಒಟ್ಟಾರೆ 3,395 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ತಿಳಿಸಿದೆ.
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಭಾರತದಲ್ಲಿ ರಸ್ತೆ ಅಪಘಾತಗಳು-2022 ವರದಿಯನ್ನು ಸಿದ್ಧಪಡಿಸಿದೆ.
2021ರಲ್ಲಿ ವಾಹನಗಳ ಚಾಲನೆ ವೇಳೆ ಮೊಬೈಲ್ ಬಳಕೆಯಿಂದ 6,530 ರಸ್ತೆ ಅಪಘಾತಗಳು ಸಂಭವಿಸಿದ್ದು, 2,982 ಮಂದಿ ಬಲಿಯಾಗಿದ್ದು, 5,394 ಮಂದಿ ಗಾಯಗೊಂಡಿದ್ದರು.
ಈ ವರದಿ ಪ್ರಕಾರ 2022ರಲ್ಲಿ ಭಾರತದಲ್ಲಿ ರಸ್ತೆ ಅಪಘಾತ ಪ್ರಕರಣಗಳು ಶೇ 12ರಷ್ಟು ಹೆಚ್ಚಳವಾಗಿವೆ. ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಪ್ರತಿ ಗಂಟೆಗೆ 19 ಮಂದಿ ಸಾವನ್ನಪ್ಪುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಚಾಲನೆ ಮಾಡಿದ್ದರಿಂದಾಗಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 50,029 ಮಂದಿ ಬಲಿಯಾಗಿದ್ದು, ಇದರಲ್ಲಿ 35,692 ಮಂದಿ ಚಾಲನೆ ಮಾಡುತ್ತಿದವರಾದರೆ, 14,337 ಮಂದಿ ಹಿಂಬದಿ ಸವಾರರಾಗಿದ್ದಾರೆ. ಸೀಟ್ ಬೆಲ್ಟ್ ಧರಿಸದ ಕಾರಣ 16,715 ಮಂದಿ ಬಲಿಯಾಗಿದ್ದಾರೆ. ಮದ್ಯಸೇವನೆ ಮಾಡಿ ವಾಹನ ಚಾಲನೆ ಮಾಡಿದ್ದರಿಂದಾಗಿ 10,080 ಅಪಘಾತಗಳು ಸಂಭವಿಸಿದ್ದು, 4201 ಮಂದಿ ಮೃತಪಟ್ಟಿದ್ದರೆ, 8809 ಮಂದಿ ಗಾಯಗೊಂಡಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಒಟ್ಟಾರೆ 4,61,312 ರಸ್ತೆ ಅಪಘಾತ ಪ್ರಕರಣಗಳು ನಡೆದಿವೆ. ಇದರಲ್ಲಿ 1,68,491 ಮಂದಿ ಬಲಿಯಾಗಿದ್ದು, 4,43,366 ಮಂದಿ ಗಾಯಗೊಂಡಿದ್ದಾರೆ. 2021ರಲ್ಲಿ 4,12,432 ರಸ್ತೆ ಅಪಘಾತಗಳಲ್ಲಿ 1,53,972 ಮಂದಿ ಬಲಿಯಾಗಿದ್ದು, 3,48,448 ಮಂದಿ ಗಾಯಗೊಂಡಿದ್ದರು. ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತಗಳಿಗೆ ಅತಿವೇಗದ ಚಾಲನೆಯೇ ಕಾರಣವಾಗಿತ್ತು. ಅತಿ ವೇಗದ ಚಾಲನೆಯಿಂದ 3,33,323 ಅಪಘಾತಗಳು ಸಂಭವಿಸಿವೆ. ಇದರಲ್ಲಿ 1,19,904 ಮಂದಿ ಮೃತಪಟ್ಟಿದ್ದರೆ, 3,22,795 ಮಂದಿ ಗಾಯಗೊಂಡಿದ್ದರು.
ಅತಿಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 39,762 ರಸ್ತೆ ಅಪಘಾತಗಳು ಸಂಭವಿಸಿದ್ದು, 11,702 ಮಂದಿ ಮೃತಪಟ್ಟಿದ್ದಾರೆ. 2021ರಲ್ಲಿ ನಡೆದ 34,647 ಅಪಘಾತ ಪ್ರಕರಣಗಳಲ್ಲಿ 10,038 ಮಂದಿ ಬಲಿಯಾಗಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
Highlights - ಅಂಕಿಅಂಶ ಅಪಘಾತಕ್ಕೆ ಕಾರಣ;ಅಪಘಾತಗಳ ಸಂಖ್ಯೆ;ಮೃತರ ಸಂಖ್ಯೆ; ಗಾಯಾಳು ಸಂಖ್ಯೆ ಮೊಬೈಲ್ ಬಳಕೆ;7,558;3,395;6,255 ಮದ್ಯಸೇವನೆ;10,080;4201;8,809