ಡೋಡಾ : ಡೋಡಾ ಜಿಲ್ಲೆಯ ಬಟೋತ್-ಕಿಸ್ತವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬಸ್‌ವೊಂದು 300 ಅಡಿ ಆಳದ ಕಣಿವೆಗೆ ಬಿದ್ದ ಪರಿಣಾಮ ಕನಿಷ್ಠ 38 ಮಂದಿ ಮೃತಪಟ್ಟಿದ್ದು, 17 ಜನರು ಗಾಯಗೊಂಡಿದ್ದಾರೆ. ಬಸ್‌ನಲ್ಲಿ 55 ಪ್ರಯಾಣಿಕರಿದ್ದರು.
ರಾಷ್ಟ್ರೀಯ ಹೆದ್ದಾರಿಯ ತ್ರುಂಗಲ್-ಅಸ್ಸಾರ್ ಬಳಿ ಬಸ್ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದಿದೆ.
ಪರಿಹಾರ: ಅಪಘಾತ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಅಪಘಾತ ಹೆಚ್ಚು: ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಡೋಡಾ-ಕಿಸ್ತವಾರ್ ಪ್ರದೇಶದಲ್ಲಿ (ಚೆನಾಬ್ ಕಣಿವೆ) ಪದೇಪದೇ ಅಪಘಾತಗಳು ಸಂಭವಿಸುವುದಕ್ಕೆ ಕಾರಣ ಗುರುತಿಸುವುದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸುವಂತೆ ಜಮ್ಮು-ಕಾಶ್ಮೀರ ಹೈಕೋರ್ಟ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಹೈಕೋರ್ಟ್ ಆದೇಶದ ಹೊರತಾಗಿಯೂ, ಈ ಕಣಿವೆಯಲ್ಲಿ ಅಪಘಾತಗಳನ್ನು ತಡೆಯುವುದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ರಸ್ತೆ ಬದಿಯಲ್ಲಿ ಮರಳು ಮತ್ತು ಜಲ್ಲಿಕಲ್ಲುಗಳ ರಾಶಿಗಳಿರುವುದು ಚೆನಾಬ್ ಕಣಿವೆಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸಲು ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ. ಜೊತೆಗೆ, ಪರವಾನಗಿ ಹೊಂದಿರದ ಚಾಲಕರು ವಾಹನ ಚಲಾಯಿಸುವುದು, ಅಜಾಗರೂಕತೆ ಹಾಗೂ ಮದ್ಯಸೇವಿಸಿ ಚಾಲನೆ ಮಾಡುವುದು, ಸಂಚಾರ ನಿಯಮಗಳ ಉಲ್ಲಂಘನೆ ಮಾಡುವುದು ಕೂಡ ಅಪಘಾತಗಳು ಹೆಚ್ಚಲು ಕಾರಣ ಎಂದು ತಜ್ಞರು ಹೇಳುತ್ತಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳು ಹಾಗೂ ಈ ಅಪಘಾತಗಳಲ್ಲಿನ ಸಾವಿನ ಪ್ರಮಾಣ ವಿಚಾರದಲ್ಲಿ ಜಮ್ಕು-ಕಾಶ್ಮೀರವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.