ತಿರುವನಂತಪುರಂ: ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಕೇರಳದ ಯುವಕ ಮತ್ತು ಪಶ್ಚಿಮ ಬಂಗಾಳದ ಯುವತಿ ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಸುಟ್ಟ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಕೇರಳದ ಇಡುಕ್ಕಿ ಮೂಲದ ಅಬಿಲ್ ಅಬ್ರಾಹಂ (29) ಮತ್ತು ಕೋಲ್ಕತದ ಸೌಮಿನಿ ದಾಸ್ (20) ಎಂದು ಗುರುತಿಸಲಾಗಿದೆ.
ಮೂರು ದಿನಗಳ ಹಿಂದೆ ಇಬ್ಬರು ಸಹಜೀವನ ಆರಂಭಿಸಿದರು. ಈಗಾಗಲೇ ಮದುವೆಯಾಗಿದ್ದ ಸೌಮಿನಿ, ಮಾರತಹಳ್ಳಿಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಸ್ವತಂತ್ರವಾಗಿ ಬದಕಲು ಬಿಡದ ಕಾರಣ ನಿನ್ನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ, ತಾನು ಲಿವಿಂಗ್ ಟುಗೆದರ್ನಲ್ಲಿದ್ದು, ಆತನೊಂದಿಗೆ ಉಳಿದ ಜೀವನ ಸಾಗಿಸುವುದಾಗಿ ಸೌಮಿನಿ, ತನ್ನ ಗಂಡನಿಗೆ ಹೇಳಿದ್ದಳು ಎಂದು ಹೇಳಲಾಗಿದೆ.
ಮತ್ತೊಂದೆಡೆ ಕೇರಳದಲ್ಲಿ ಹೋಂ-ನರ್ಸಿಂಗ್ ಕೆಲಸ ಮಾಡುತ್ತಿದ್ದ ಅಭಿಲ್ ಅಬ್ರಹಾಂ, ಮೂರು ತಿಂಗಳ ಹಿಂದೆ ಪರಿಚಯವಾಗಿತ್ತು. ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಬಳಿಕ ಫ್ಲ್ಯಾಟ್ನಲ್ಲಿ ಒಟ್ಟಿಗೆ ಸಹಜೀವನ ನಡೆಸುತ್ತಿದ್ದರು. ಇಬ್ಬರ ನಡುವೆ ಏನಾಯಿತೇನೋ ಗೊತ್ತಿಲ್ಲ. ಭಾನುವಾರ ಮಧ್ಯಾಹ್ನ 12.45ರಲ್ಲಿ ಫ್ಲ್ಯಾಟ್ನಿಂದ ಚೀರಾಟ ಮತ್ತು ದಟ್ಟ ಹೋಗೆ ಕಾಣಿಸಿಕೊಂಡಿದೆ. ಅಕ್ಕಪಕ್ಕದ ನಿವಾಸಿಗಳು ಗಮನಿಸಿ ಅಗ್ನಿ ಶಾಮಕ ಮತ್ತು ನಮ್ಮ 112ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಬಂದು ನೋಡುವಷ್ಟರಲ್ಲಿ ಸೌಮಿನಿ ದಾಸ್ ಸಂಪೂರ್ಣ ಸುಟ್ಟು ಮೃತಪಟ್ಟಿದ್ದಳು. ಗಂಭೀರ ಸ್ವರೂಪದ ಗಾಯಗಳಾಗಿದ್ದ ಅಭಿಲ್ ಅಬ್ರಹಾಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಮತ್ತು ಇಬ್ಬರ ಮೊಬೈಲ್ ಫೋನ್ಗಳನ್ನು ಪರೀಕ್ಷಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.