ವಿಶಾಖಪಟ್ಟಣ : ಭಾನುವಾರ ತಡರಾತ್ರಿ ಆಂಧ್ರಪ್ರದೇಶದ ವಿಶಾಖಪಟ್ಟಣದ ಮೀನುಗಾರಿಕಾ ಬಂದರಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 40 ಫೈಬರ್-ಯಾಂತ್ರೀಕೃತ ಬೋಟ್‌ಗಳು ಸುಟ್ಟುಹೋಗಿವೆ. ಘಟನೆಯಲ್ಲಿ ಯಾವುದೇ ಸಾವು ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳವು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಬೋಟ್‌ನಲ್ಲಿ ಹೊತ್ತಿಕೊಂಡ ಬೆಂಕಿಯು ಬಳಿಕ ಸುತ್ತಮುತ್ತಲಿನ ಇತರೆ ಬೋಟ್‌ಗಳಿಗೂ ಹಬ್ಬಿದೆ ಎಂದು ಅಧಿಕಾರಿ ಹೇಳಿದ್ದಾರೆ. ಅಪರಿಚಿತ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ದೋಣಿಗಳಿಗೆ ಬೆಂಕಿ ಹಚ್ಚಿರಬಹುದು ಎಂದು ಸ್ಥಳೀಯ ಮೀನುಗಾರರು ಶಂಕಿಸಿದ್ದಾರೆ. ಘಟನೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
'ವಿಶಾಖಪಟ್ಟಣದ ಮೀನುಗಾರಿಕಾ ಬಂದರಿನಲ್ಲಿದ್ದ ಬೋಟ್‌ನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ, ಅದು ಸುಮಾರು 35 ಫೈಬರ್-ಯಾಂತ್ರೀಕೃತ ಬೋಟ್‌ಗಳಿಗೆ ವ್ಯಾಪಿಸಿದೆ. ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ತಂಡಗಳು ಸ್ಪಂದಿಸಿ ಬೆಂಕಿಯನ್ನು ಯಶಸ್ವಿಯಾಗಿ ತಹಬದಿಗೆ ತರಲಾಗಿದೆ. ಬೆಂಕಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಸಾವಿನ ಬಗ್ಗೆ ವರದಿಯಾಗಿಲ್ಲ' ಎಂದು ವಿಶಾಖಪಟ್ಟಣದ ಉಪ ಪೊಲೀಸ್ ಆಯುಕ್ತ ಆನಂದ್ ರೆಡ್ಡಿ ಹೇಳಿದ್ದಾರೆ.