ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಅವರಿಗೂ ಪ್ರಶಸ್ತಿ ಲಭಿಸಿದೆ.
ನ.1ರಂದು ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ಪೀಕರ್ ಯು.ಟಿ.ಖಾದರ್ ಅವರ ಸಮ್ಮುಖ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಪ್ರದಾನಿಸಲಿದ್ದಾರೆ.
ಅಬ್ದುಲ್ಲ ಮಾದುಮೂಲೆ:
ಮೂಲತಃ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾದುಮೂಲೆ ನಿವಾಸಿಯಾಗಿರುವ ಅಬ್ದುಲ್ಲ ಮಾದುಮೂಲೆಯವರು ಕಳೆದ 25 ವರ್ಷಗಳಿಂದ ಉದ್ಯೋಗ ನಿಮಿತ್ತ ಅಬುದಾಬಿಯಲ್ಲಿ ನೆಲೆಸಿದ್ದಾರೆ. ಪ್ರಕೃತ, ಹದಿನಾರು ವರ್ಷಗಳಿಂದ ಅಬುದಾಬಿಯ ಜಾಹೀದ್ ಫೌಂಡೇಶನ್ ನ ಫೈನಾನ್ಸ್ ಕಂಟ್ರೋಲರ್ ಆಗಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಬುದಾಬಿ ಇನ್ವೆಸ್ಟ್ಮೆಂಟ್ ಅಥೋರಿಟಿಯಲ್ಲಿ ಏಳು ವರ್ಷಗಳಿಂದ ಹಾಗೂ ಇತಿಯಾದ್
ಏರ್ ವೇಶ್ ನಲ್ಲಿ ಕಳೆದ ಒಂದೂವರೆ ವರ್ಷದಿಂದ ಉನ್ನತ ಪದವಿಯನ್ನು ಅಲಂಕರಿಸಿದ್ದಾರೆ. ಬಿ.ಕಾಂ., ಚಾರ್ಟಡ್ ಅಕೌಂಟೆಂಟ್ ಪದವಿ ಪೂರ್ತಿಗೊಳಿಸಿದ ಬಳಿಕ ಎಕೌಂಟ್ಸ್ ಸಂಬಂಧವಾಗಿ ಅನೇಕ ಪದವಿ, ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.
ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕಲೆಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಬ್ದುಲ್ಲಾರವರು ಕೊಲ್ಲಿ ರಾಷ್ಟ್ರಗಳಲ್ಲಿ ಹಾಗೂ ದ.ಕ, ಕಾಸರಗೋಡು ಜಿಲ್ಲೆಗಳಲ್ಲಿ ಕನ್ನಡ ಭಾಷೆ, ಕಲೆಗಳ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಕನ್ನಡ ಪರ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಂತು ಕನ್ನಡ ಚಟುವಟಿಕೆಗಳಿಗೆ ಕೈ ಮೈ ಮರೆತು ಬೆಂಬಲ ನೀಡುತ್ತಾರೆ. ಕಲಾ ಪೋಷಕರಾದ ಅಬ್ದುಲ್ಲಾ ಅವರು ಹುಟ್ಟೂರಿನ ಗಂಡುಕಲೆಯಾದ ಯಕ್ಷಗಾನ, ಇತರ ಜಾನಪದ ಸಾಂಸ್ಕೃತಿಕ ಕಲೆಗಳಾದ ದಫ್ ಮುಟ್ಟು , ಕೋಲಾಟ ಮುಂತಾದವುಗಳ ಉಳಿವು ಬೆಳವಿಗೆ ಶಕ್ತಿಮೀರಿ ಶ್ರಮಿಸುತ್ತಿದ್ದು, ಈ ಕಲೆಗಳ ಪ್ರದರ್ಶನ, ಪ್ರಾತ್ಯಕ್ಷಿಕೆಗೆ ನೂರಾರು ಕಡೆ ವೇದಿಕೆ ಒದಗಿಸಿದ್ದಾರೆ. ತಮ್ಮಲ್ಲಿಗೆ ಬರುವ ಕಲಾವಿದರನ್ನು, ಸಂಘಟಕರನ್ನು ಬರಿಗೈಯಲ್ಲಿ ಕಳುಹಿಸುವ ಜಾಯಮಾನ ಅವರದ್ದಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನಾಣ್ನುಡಿಯಂತೆ ತಾವು ಗಳಿಸಿದ ಆದಾಯದ ಒಂದು ಪಾಲನ್ನು ಸದಾ ಸಾಮಾಜಿಕ ಚಟುವಟಿಕೆಗಳಿಗೆ ನೀಡುತ್ತಾ ಬಂದಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಹಲವಾರು ಶಾಲೆ, ದೇವಾಲಯ, ಮಸೀದಿ, ರಂಗ ಮಂದಿರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಪೋಷಕರಾಗಿದ್ದು, ಇವುಗಳ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾಯಿಲೆ ಪೀಡಿತರಿಗೆ ವೈದ್ಯಕೀಯ ನೆರವು, ವಿವಾಹ ಸಹಾಯ, ಶಿಕ್ಷಣ ಸಹಾಯ, ಅನ್ನದಾನ, ವಸ್ತ್ರದಾನ, ಪ್ರತೀ ವರ್ಷ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ ಹೀಗೆ, ಸರಿ ಸಾಟಿಯಿಲ್ಲದ ಸೇವೆಗಳು ಧಾರೆಯಾಗಿ ಹರಿದಿದೆ; ಹರಿಯುತ್ತಲೇ ಇದೆ. ಕ್ರೀಡಾಕೂಟ, ರಸಮಂಜರಿ, ಕನ್ನಡ- ತುಳು, ನಾಟಕ ಹಾಗೂ ಯಕ್ಷಗಾನ ಸ್ಪರ್ಧೆ ಮುಂತಾದವುಗಳಿಗೆ ಪ್ರಾಯೋಜಕತ್ವ ನೀಡುತ್ತಾ ಬಂದಿದ್ದಾರೆ. ಇದರ ಜತೆಗೆ ದ.ಕ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟು ನೂರಾರು ಬಡ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ.
ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಉದ್ಯಮ, ಗ್ರಾಮೀಣಾಭಿವೃದ್ಧಿ ಇವರ ಆಸಕ್ತಿಯ ಕ್ಷೇತ್ರಗಳು. ಪ್ರಕೃತಿ ವಿಕೋಪಕ್ಕೊಳಗಾಗುವ ಕಲಾವಿದರಿಗೆ ಹಾಗೂ ಸಾರ್ವಜನಿಕರಿಗೆ ಪುನರ್ವಸತಿ ಸಹಿತ ಅಗತ್ಯ ನೆರವು, ಏಡ್ಸ್, ಅರ್ಬುದ, ಮೂತ್ರಕೋಶ ಸಂಬಂಧಿ ರೋಗಿಗಳಿಗೆ ವೈದ್ಯಕೀಯ ನೆರವು, ಸತಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಡ ರೋಗಿಗಳಿಗೆ, ಪರಿಚಾರಕರಿಗೆ ಆಹಾರ ವಿತರಣೆಗೆ ಕ್ರಮ, ಕುಟುಂಬ ಹಾಗೂ ಸಮಾಜದಿಂದ ನಿರ್ಲಕ್ಷಿಸಲ್ಪಡುವ ನಿರ್ಗತಿಕರ ಪುನರ್ವಸತಿಗಾಗಿ ಅನಾಥಾಶ್ರಮಗಳೊಂದಿಗೆ ಸಹಕಾರದ ಸೇವಾ ಕಾರ್ಯ, ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರು ಮರಣವಪ್ಪಿದಲ್ಲಿ ಅವರ ಪಾರ್ಥಿವ ಶರೀರವನ್ನು ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ, ಕೊರೋನಾ ಸಂದರ್ಭದಲ್ಲಿ ನೂರಾರು ಕುಟುಂಬಗಳಿಗೆ ಉಚಿತ ಆಹಾರ ಕಿಟ್ ವಿತರಣೆ, ಬಡ ರಿಕ್ಷಾ ಚಾಲಕರಿಗೆ ಪೆಟ್ರೋಲ್ ಪೂರೈಕೆ, ಆರ್ಥಿಕ ದುರ್ಬಲರಿಗೆ ಉಚಿತವಾಗಿ ಕೊರೋನಾ ವ್ಯಾಕ್ಸಿನ್ ಗೆ ವ್ಯವಸ್ಥೆ, ಕೊರೋನಾ ಕಾಲದಲ್ಲಿ ಇತರ ರಾಜ್ಯ ಕಾರ್ಮಿಕರಿಗೆ ಊಟೋಪಚಾರ ವ್ಯವಸ್ಥೆಯನ್ನು ಹಮ್ಮಿಕೊಂಡು "ಬಡವರ ಬಂಧು " ಎಂದೇ ಅರಿಯಲ್ಪಟ್ಟ ಮಹಾನುಭಾವ. ಆತ್ಮೀಯರು ಅವರನ್ನು ಪ್ರೀತಿಯಿಂದ 'ಅದ್ಲಚ್ಚ' ಎಂದೇ ಸಂಬೋಧಿಸುತ್ತಾರೆ.
ಪುರಸ್ಕಾರ -ಪ್ರಶಸ್ತಿಗಳು : ಕ್ರಿಯಾಶೀಲ, ಆದರ್ಶ ವ್ಯಕ್ತಿತ್ವ ಹೊಂದಿರುವ, ಸದಾ ಸಮಾಜಕ್ಕಾಗಿ ತುಡಿಯುವ ಹೃದಯ ವೈಶಾಲ್ಯವುಳ್ಳಅಬ್ದುಲ್ಲ ಮಾದುಮೂಲೆ ಅವರ ಸೇವೆ, ಸಾಧನೆಯನ್ನು ಪರಿಗಣಿಸಿ ನೂರಾರು ಕಡೆಗಳಲ್ಲಿ ಅವರಿಗೆ ಸನ್ಮಾನ, ಪುರಸ್ಕಾರ, ಪ್ರಶಸ್ತಿಗಳು ಒಲಿದಿವೆ.
ಬೆಂಗಳೂರಿನ ಸೃಷ್ಟಿ ಕಲಾಕೇಂದ್ರ ಕೊಡಮಾಡುವ ಪ್ರತಿಷ್ಟಿತ "ತುಳುನಾಡ ಬೊಳ್ಳಿ ಪ್ರಶಸ್ತಿ' , ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ " ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ", ಕೆ.ಯಂ.ಸಿ.ಸಿ.ಯು. ಮಂಜೇಶ್ವರ ಮಂಡಲ ಸಮಿತಿಯ " ಮಂಜೇಶ್ವರ ರತ್ನ ಪ್ರಶಸ್ತಿ ", ದುಬಾಯಿ ಬ್ಯಾರಿ ಕಲ್ಚರಲ್ ಫೋರಂನ "ವರ್ಷದ ವ್ಯಕ್ತಿ" ಪುರಸ್ಕಾರ, ದುಬಾಯಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ "ಗಡಿನಾಡ ರತ್ನ" ಪ್ರಶಸ್ತಿ ಈ ಸಾಲಿನಲ್ಲಿ ಕೆಲವು ಮಾತ್ರ.
ಅಬುದಾಬಿ ಇಂಡಿಯನ್ ಸ್ಕೂಲ್ ನ ಆಡಳಿತ ಮಂಡಳಿಯ ಕಾರ್ಯದರ್ಶಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಯುಎಇ ಚಾಪ್ಟರ್ ಉಪಾಧ್ಯಕ್ಷ, ಅಬುದಾಬಿ ಬ್ಯಾರೀಸ್ ವೆಲ್ಫೇರ್ ಫಾರಂನ ಪ್ರಧಾನ ಕಾರ್ಯದರ್ಶಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಯುಎಇ ಘಟಕದ ಗೌರವಾಧ್ಯಕ್ಷ, ಅಬುದಾಬಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಊರಿನ ಅಡ್ಕಸ್ಥಳ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ, ಕಾಸರಗೋಡು ಕೈರಳಿ ಪ್ರಕಾಶನ ಸಂಸ್ಥೆಯ ಗೌರವ ಸಲಹೆಗಾರ ಸಹಿತ ಅನೇಕ ಸಂಘ, ಸಂಸ್ಥೆ, ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಆ ಸಂಸ್ಥೆಗಳ ಉನ್ನತಿಗಾಗಿ ತನ್ನನ್ನು ತೊಡಗಿಸಿಕೊಂಡವರಾಗಿದ್ದಾರೆ.
ಈ ರೀತಿಯಲ್ಲಿ ಸಾಮಾಜಿಕ - ಸಾಂಸ್ಕೃತಿಕ ಔನ್ನತ್ಯಕ್ಕೆ ತನ್ನ ಸರ್ವಸ್ವವನ್ನು ಮುಡಿಪಾಗಿರಿಸಿ ನಿರಂತರ ಕ್ರಿಯಾಶೀಲವಾಗಿರುವ ಅಬ್ದುಲ್ಲ ಮಾದುಮೂಲೆ ಅವರಿಗೆ ಇದೀಗ 2023ನೇ ಸಾಲಿನ ಪ್ರತಿಷ್ಠಿತ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕುತ್ತಿರುವುದು ಅರ್ಹತೆಗೆ ಸಂದ ಗೌರವವೇ ಸರಿ. ಸದ್ರಿ ಪ್ರಶಸ್ತಿಯು ಅವರ ಸೇವಾ ತುರಾಯಿ ಮೇಲಿನ ಚಿನ್ನದ ಗರಿಯಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.