ನವದೆಹಲಿ: ನೇರ ಮಾರಾಟದ ಗ್ರಾಹಕ ಸರಕುಗಳ ಕಂಪನಿ ಆಮ್ವೇ ಇಂಡಿಯಾವು ಬಹುಹಂತದ ಮಾರುಕಟ್ಟೆ ಯೋಜನೆಯಡಿ ಸುಮಾರು ₹4 ಸಾವಿರ ಕೋಟಿಯಷ್ಟು ವಂಚನೆ ನಡೆಸಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.
ಆಮ್ವೇ ಇಂಡಿಯಾ ಕಂಪನಿ ನಡೆಸಿರುವ ಅವ್ಯವಹಾರ ಹಾಗೂ ವಂಚನೆಗೆ ಸಂಬಂಧಿಸಿದಂತೆ ಹೈದರಾಬಾದ್‌ನ ಹಣ ಅಕ್ರಮ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಈ ಕುರಿತು ವಿವರಿಸಿದೆ.
ಬಹುಹಂತದ ಮಾರುಕಟ್ಟೆ ಹಗರಣಕ್ಕೆ ಸಂಬಂಧಿಸಿದಂತೆ ಕಂಪನಿಯ ನಿರ್ದೇಶಕರ ವಿರುದ್ಧ ತೆಲಂಗಾಣ ಪೊಲೀಸರು ವಿವಿಧೆಡೆ ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಇದರ ಆಧಾರದ ಮೇಲೆ ಜಾರಿ ನಿರ್ದೇಶಾಲಯವು ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿತ್ತು.
ಸರಕುಗಳ ಮಾರಾಟದ ಸೋಗಿನಲ್ಲಿ ಕಂಪನಿಯು ಹಣದ ಅಕ್ರಮ ವರ್ಗಾವಣೆ ದಂಧೆ ನಡೆಸಿದೆ. ಹೆಚ್ಚು ಹೆಚ್ಚು ಹೊಸ ಸದಸ್ಯರನ್ನು ನೋಂದಣಿ ಮಾಡಿದರೆ ಅತಿಹೆಚ್ಚಿನ ಕಮಿಶನ್ ಹಾಗೂ ಪ್ರೋತ್ಸಾಹಧನ ನೀಡುವುದಾಗಿ ಹೇಳಿ ಪಿರಮಿಡ್ ವಂಚನೆ ನಡೆಸಿದೆ ಎಂದು ಇ.ಡಿ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಂಪನಿಯು, 'ಕಾನೂನಾತ್ಮಕವಾಗಿಯೇ ಈ ಎಲ್ಲಾ ಪ್ರಕ್ರಿಯೆ ನಡೆಸಲಾಗಿದೆ' ಎಂದು ಸಮರ್ಥಿಸಿಕೊಂಡಿದೆ.
'ಭಾರತದಲ್ಲಿ ಕಂಪನಿಯು ತನ್ನ ಕಾರ್ಯ ಚಟುವಟಿಕೆ ಆರಂಭಿಸಿ 25 ವರ್ಷಗಳು ಸಂದಿವೆ. ದೇಶದ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿದೆ. ಜಾರಿ ನಿರ್ದೇಶನಾಲಯದ ತನಿಖೆಗೂ ಸಹಕರಿಸಿದ್ದೇವೆ. ಕಾಲಕಾಲಕ್ಕೆ ಅವರು ಕೇಳಿರುವ ಮಾಹಿತಿಯನ್ನು ಹಂಚಿಕೊಂಡಿದ್ದೇವೆ' ಎಂದು ಕಂಪನಿಯ ವಕ್ತಾರ ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷದ ಏಪ್ರಿಲ್‌ನಲ್ಲಿ ಕಂಪನಿಗೆ ಸೇರಿದ ₹757 ಕೋಟಿ ಮೊತ್ತದ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿತ್ತು.