ಖುಂಟಿ : ಜಾರ್ಖಂಡ್‌ಗೆ ₹50,000 ಕೋಟಿ ವೆಚ್ಚದ ಯೋಜನೆಗಳ ಸುರಿಮಳೆಯಾಗಿದೆ. ಅಲ್ಲದೆ, ಶೇ 100ರಷ್ಟು ರೈಲು ವಿದ್ಯುದ್ದೀಕರಣವಾಗಿರುವ ರಾಷ್ಟ್ರದ ಮೊದಲ ರಾಜ್ಯವೆನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಮೋದಿ ಅವರು ಬುಡಕಟ್ಟು ಸಮುದಾಯದ ನಾಯಕ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿ ಮಾತನಾಡಿದರು.
ಇದಕ್ಕೂ ಮೊದಲು ಮಂಗಳವಾರ ರಾತ್ರಿ ರಾಂಚಿಯಲ್ಲಿ ಪ್ರಧಾನಿಯವರು 10 ಕಿಲೋಮೀಟರ್ ರೋಡ್ ಶೋ ನಡೆಸಿದರು.
ಆದಿವಾಸಿಗಳ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ, ಆದಿವಾಸಿಗಳು ದೇಶಕ್ಕೆ ಗಣನೀಯ ಕೊಡುಗೆ ನೀಡಿದ್ದರೂ ಅದಕ್ಕೆ ತಕ್ಕ ಮನ್ನಣೆ ಸಿಕ್ಕಿಲ್ಲ. ಬುಡಕಟ್ಟು ಯೋಧರಿಗೆ ದೇಶವು ಸದಾ ಋಣಿಯಾಗಿರಲಿದೆ ಎಂದರು.
ರಾಷ್ಟ್ರದ ಅಭಿವೃದ್ಧಿಗಾಗಿ ಮಹಿಳೆಯರು, ರೈತರು, ಯುವಕರು ಮತ್ತು ಮಧ್ಯಮ ವರ್ಗ ಮತ್ತು ಬಡವರು - ನಾಲ್ಕು ಆಧಾರ ಸ್ತಂಭಗಳಿದ್ದಂತೆ. ಈ ಆಧಾರಸ್ತಂಭಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಮೋದಿ ಒತ್ತಿ ಹೇಳಿದರು.
2014ರಿಂದ ದೇಶದಾದ್ಯಂತ ಸಂಪೂರ್ಣ ಎಲ್‌ಪಿಜಿ ಸೌಲಭ್ಯ ಕಲ್ಪಿಸಲಾಗಿದೆ. ದೇಶದ 70ರಷ್ಟು ಜನಸಂಖ್ಯೆಯು ಜಲ ಜೀವನ್ ಮಿಷನ್ ವ್ಯಾಪ್ತಿಯಲ್ಲಿದೆ. 100 ಪ್ರತಿಶತದಷ್ಟು ಜನರು ರೋಗನಿರೋಧಕ ಶಕ್ತಿ ಹೊಂದಿದ್ದಾರೆ ಎಂದು ಮೋದಿ ಹೇಳಿದರು.
ಖುಂಟಿ ಫುಟ್‌ಬಾಲ್ ಮೈದಾನದಲ್ಲಿ, ದುರ್ಬಲ ಬುಡಕಟ್ಟು ಗುಂಪುಗಳ ಅಭಿವೃದ್ಧಿಗಾಗಿ ₹24,000 ಕೋಟಿ ಯೋಜನೆಯನ್ನು ಮೋದಿ ಅನಾವರಣಗೊಳಿಸಿದರು. ಜೊತೆಗೆ ರಾಜ್ಯದಲ್ಲಿ ₹7,200 ಕೋಟಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೆ, 'ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ'ಗೂ ಚಾಲನೆ ನೀಡಿದರು.