ನವದೆಹಲಿ: 'ಪ್ರಯಾಣಿಕರಿಗೆ ಬೈಕ್ ಟ್ಯಾಕ್ಸಿ ಸೇವೆ ಒದಗಿಸುವವರು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹೊಂದುವುದು ಕಡ್ಡಾಯ ಎಂಬ ನೀತಿಯ ಅನುಮೋದನೆಯಿಂದ ಸುಮಾರು 50 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ' ಎಂದು ದೆಹಲಿ ಬೈಕ್ ಟ್ಯಾಕ್ಸಿ ಚಾಲಕರು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ಎಎಪಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
'ದೆಹಲಿ ವಾಹನಗಳ ಅಗ್ರಿಗೇಟರ್ ಮತ್ತು ಡೆಲಿವರಿ ಸರ್ವೀಸ್ ಪ್ರೊವೈಡರ್ ಯೋಜನೆ-2023' ಅನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಅನುಮೋದಿಸಿದ್ದಾರೆ. ಈ ಹೊಸ ನೀತಿಯು ಶೀಘ್ರದಲ್ಲೇ ಅಧಿಸೂಚನೆಯಾಗುವ ಸಾಧ್ಯತೆ ಇದೆ.
ಇದರ ಬೆನ್ನಲ್ಲೇ, ಆಪ್ನಾ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಪತ್ರ ಬರೆದು, ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ, ತಮ್ಮ ಮನವಿಗಳ ಬಗ್ಗೆ ಯಾರೂ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.
ಸದ್ಯ ಪ್ರಯಾಣಿಕರಿಗೆ ಬೈಕ್ ಟ್ಯಾಕ್ಸಿ ಒದಗಿಸುತ್ತಿರುವ ಪೆಟ್ರೋಲ್ ಬೈಕ್ ಹೊಂದಿರುವ ಯಾವುದೇ ವ್ಯಕ್ತಿಯು ತಕ್ಷಣವೇ ಎಲೆಕ್ಟ್ರಿಕ್ ಬೈಕ್ ಖರೀದಿಸುವುದು ಹೇಗೆ? ಜೊತೆಗೆ ಅಷ್ಟು ಪ್ರಮಾಣದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಲಭ್ಯವೂ ಇಲ್ಲ. ಅಲ್ಲದೆ, ನಮ್ಮಲ್ಲಿ ಆ ಬೈಕ್ ಖರೀದಿಸುವಷ್ಟು ಹಣ ಇದೆಯೇ ಎಂಬುದನ್ನು ಸರ್ಕಾರ ಅರ್ಥೈಸಿಕೊಳ್ಳಬೇಕು ಎಂದು ಆಶಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.