HEALTH TIPS

ಬಡವರಿಗೆ ಆಹಾರ ಧಾನ್ಯ ವಿತರಣೆ 5 ವರ್ಷಗಳಿಗೆ ವಿಸ್ತರಣೆ: ಪ್ರಧಾನಿ ಮೋದಿ

Top Post Ad

Click to join Samarasasudhi Official Whatsapp Group

Qries

              ತ್ಲಾಮ್‌: ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಅಡಿ ದೇಶದ 80 ಕೋಟಿ ಜನರಿಗೆ ಆಹಾರ ಧಾನ್ಯ ಒದಗಿಸುವ ಕಾರ್ಯಕ್ರಮವನ್ನು ಇನ್ನೂ ಐದು ವರ್ಷಗಳಿಗೆ ಮುಂದುವರೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭರವಸೆ ನೀಡಿದರು.

               ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಸಾರ್ವಜನಿಕ ಸಭೆ ನಡೆಸಿದ ಅವರು, 'ಕೋವಿಡ್‌ ಸಾಂಕ್ರಾಮಿಕದ ವೇಳೆ ತಮ್ಮ ಮಕ್ಕಳಿಗೆ ಆಹಾರ ಒದಗಿಸುವುದು ಬಡವರಿಗೆ ದೊಡ್ಡ ಸವಾಲಾಗಿತ್ತು.

ಯಾರೂ ಹಸಿದು ಮಲಗಬಾರದು ಎಂದು ನಾನು ಈ ಯೋಜನೆ ಜಾರಿಗೆ ತಂದೆ' ಎಂದು ಅವರು ಹೇಳಿದರು.

               ಈ ಯೋಜನೆ ಅಡಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯ ವಿತರಿಸಲಾಗುತ್ತದೆ.

             ಮಧ್ಯಪ್ರದೇಶ ಸರ್ಕಾರವು ಮಹಿಳೆಯರಿಗಾಗಿ ರೂಪಿಸಿರುವ ಪ್ರಮುಖ ಯೋಜನೆಗಳಾದ ಲಾಡ್ಲಿ ಬೆಹೆನಾ ಮತ್ತು ಲಾಡ್ಲಿ ಲಕ್ಷ್ಮಿ ಯೋಜನೆಗಳನ್ನು ಇಡೀ ದೇಶವೇ ಕೊಂಡಾಡುತ್ತಿದೆ ಎಂದರು.

'ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಹೋರಾಟ ನಡೆಯುತ್ತಿಲ್ಲ. ಬದಲಾಗಿ, ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕತ್ವವು ಯಾರ ಮಕ್ಕಳ ಕೈಲಿರಬೇಕು ಎಂಬ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದೆ' ಎಂದರು.

               ಕಾಂಗ್ರೆಸ್‌ ವಂಶಾಡಳಿತ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ ನಾಯಕರ ಮಾತುಗಳು ಮತ್ತು ಭರವಸೆಗಳು ಸಿನಿಮೀಯವಾಗಿವೆ. ಅವರ ವ್ಯಕ್ತಿತ್ವವೂ ಸಿನಿಮೀಯವಾಗಿದೆ. ಹೀಗಾಗಿ ಚುನಾವಣೆಯ ಸನ್ನಿವೇಶಗಳೂ ಸಿನಿಮೀಯವಾಗಿವೆ ಎಂದರು.

                  ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಮತ್ತು ಪಕ್ಷದ ರಾಜ್ಯಸಭೆ ಸದಸ್ಯ ದಿಗ್ವಿಜಯ್‌ ಸಿಂಗ್‌ ಅವರ ನಡುವಿನ ತಿಕ್ಕಾಟವನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ ಅವರು, 'ಕಾಂಗ್ರೆಸ್‌ನ ಇಬ್ಬರು ನಾಯಕರ ಮಧ್ಯೆ ಬಟ್ಟೆ ಹರಿದುಕೊಳ್ಳುವ ಸ್ಪರ್ಧೆ ನಡೆಯುತ್ತಿದೆ. ಇದು ಕೇವಲ ಟ್ರೇಲರ್‌. ಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸಿದ ಬಳಿಕ ಕಾಂಗ್ರೆಸ್‌ನ ಬಂಡವಾಳ ಬಯಲಾಗಲಿದೆ. ಆ ಪಕ್ಷದ ಆಂತರಿಕ ಕಚ್ಚಾಟ ಜನರೆದುರು ಬಹಿರಂಗವಾಗಲಿದೆ' ಎಂದರು.

               ಕಾಂಗ್ರೆಸ್‌ಗೆ ಅವಕಾಶ ಸಿಕ್ಕರೆ ಅವರು ಸಾರ್ವಜನಿಕರ ಬಟ್ಟೆಯನ್ನೂ ಹರಿಯುತ್ತಾರೆ ಎಂದು ಕುಹಕವಾಡಿದರು.

                 ಕಾಂಗ್ರೆಸ್‌ಅನ್ನು ಆದಿವಾಸಿ ವಿರೋಧಿ ಪಕ್ಷ ಎಂದು ಜರೆದ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಮಾಜಿ ನಾಯಕ ಯಶವಂತ್‌ ಸಿನ್ಹಾ ಅವರನ್ನು ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರೆದುರುದು ನಿಲ್ಲಿಸಿತು. ಈ ಮೂಲಕ ಆದಿವಾಸಿಯೊಬ್ಬರ ಸ್ಪರ್ಧೆಯನ್ನು ಕಾಂಗ್ರೆಸ್‌ ವಿರೋಧಿಸಿತ್ತು ಎಂದು ಆರೋಪಿಸಿದರು.

                  ದೇಶಕ್ಕಾಗಲೀ ಅಥವಾ ಮಧ್ಯಪ್ರದೇಶಕ್ಕಾಗಲೀ ಕಾಂಗ್ರೆಸ್‌ ಬಳಿ ಇರುವುದು ಕೇವಲ ಘೋಷಣಗಳೇ ಹೊರತು ಅಭಿವೃದ್ಧಿ ನೀಲನಕ್ಷೆಯಲ್ಲ ಎಂದು ಹೇಳಿದರು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries