HEALTH TIPS

ರಾಜಸ್ಥಾನ: ಶೇ 68.52 ಮತದಾನ

             ಜೈಪುರ: ರಾಜಸ್ಥಾನದಲ್ಲಿ ವಿಧಾನಸಭೆಯ 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಂಜೆ 6ರವರೆಗೆ ಶೇ 68.52 ರಷ್ಟು ಮತದಾನ ಆಗಿದೆ.

            ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ಆಗಿದೆ. ಒಟ್ಟು 1862 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಶೇ 74.72ರಷ್ಟು ಮತದಾನ ಆಗಿತ್ತು.

              ಒಟ್ಟು 5,29,31,152 ಮತದಾರರಿದ್ದು ಇವರಲ್ಲಿ 22,61,008 ಮಂದಿ ಹೊಸ ಮತದಾರರು. ಕನಿಷ್ಠ 3 ಲಕ್ಷ ಮಂದಿ ಅಂಚೆ ಮತಪತ್ರದ ಮೂಲಕ ಈಗಾಗಲೇ ಮತಹಾಕಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಗುರ್ಮೀತ್‌ ಸಿಂಗ್‌ ಅವರ ನಿಧನದ ಕಾರಣ ಶ್ರೀಗಂಗಾನಗರದ ಕರಣಾಪುರ ಕ್ಷೇತ್ರದ ಮತದಾನವನ್ನು ರದ್ದುಪಡಿಸಲಾಗಿದೆ.

              ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ಮಾಜಿ ಮುಖ್ಯಮಂತ್ರಿ ಬಿಜೆಪಿಯ ವಸುಂಧರಾ ರಾಜೇ, ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌, ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್‌ ಸಿಂಗ್‌ ಧೊಟಾಸರಾ, ಬಿಜೆಪಿ ನಾಯಕಿ ದಿಯಾ ಕುಮಾರಿ, ಸಂಸದ ರಾಜ್ಯವರ್ಧನ ರಾಠೋಡ್‌, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಅಧ್ಯಕ್ಷ ಹನುಮಾನ್‌ ಬೇನಿವಾಲ್‌ ಅವರ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದೆ.

                  ಮತದಾನ ಪ್ರಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡಲು ಹಲವು ವ್ಯವಸ್ಥೆಗಳನ್ನು ಆಯೋಗ ಮಾಡಿತ್ತು. 1.70 ಲಕ್ಷಕ್ಕಿಂತಲೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ರಾಜ್ಯದಾದ್ಯಂತ ನಿಯೋಜಿಸಿತ್ತು.

               ಘರ್ಷಣೆ: ರಾಜ್ಯದ ಕೆಲವೆಡೆ ಘರ್ಷಣೆಗಳು ವರದಿಯಾಗಿವೆ. ಡೀಗ್‌ ಜಿಲ್ಲೆಯ ಸನ್‌ವ್ಲೆರ್‌ ಗ್ರಾಮದಲ್ಲಿ ಕಲ್ಲು ತೂರಾಟ ನಡೆಯಿತು. ಪೊಲೀಸ್‌ ಸಿಬ್ಬಂದಿ ಸೇರಿ ಇಬ್ಬರು ಗಾಯಗೊಂಡರು. ಗುಂಪು ಚದುರಿಸಿ, ಪರಿಸ್ಥಿತಿಯನ್ನು ಸಹಜಗೊಳಿಸಲು ಪೊಲೀಸರು ಗಾಳಿಯಲ್ಲಿ 12 ಸುತ್ತು ಗುಂಡು ಹಾರಿಸಿದರು. ಕೆಲಕಾಲ ಮತದಾನವನ್ನು ನಿಲ್ಲಿಸಲಾಗಿತ್ತು.

               ಸಿಕಾರ್‌ನ ಫತೇಪುರದ ಮತಗಟ್ಟೆ ಬಳಿ ಎರಡು ಬಣಗಳ ನಡುವೆ ಘರ್ಷಣೆ ನಡೆಯಿತು. ಕಲ್ಲು ತೂರಾಟದಿಂದಾಗಿ ಯೋಧರೊಬ್ಬರು ಗಾಯಗೊಂಡಿರು. 5-7 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

               ಬಾರಿ ಕ್ಷೇತ್ರದ ಮತಗಟ್ಟೆಯೊಂದರ ಬಳಿ ಚುನಾವಣಾ ಏಜೆಂಟ್‌ ಮತ್ತು ಮತಗಟ್ಟೆ ಹೊರಗಿದ್ದ ವ್ಯಕ್ತಿ ನಡುವೆ ಜಗಳ ನಡೆಯಿತು. ಈ ವೇಳೆ ಎರಡು ವಾಹನಗಳು ಹಾನಿಗೀಡಾಗಿವೆ. ಮತದಾನವನ್ನು ಕೆಲಕಾಲ ನಿಲ್ಲಿಸಿ ಮತ್ತೆ ಆರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಇಬ್ಬರು ಮೃತ: ಪಾಲಿ ಜಿಲ್ಲೆಯಲ್ಲಿ ಬಿಜೆಪಿಯ ಏಜೆಂಟರೊಬ್ಬರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.

               ಸುಮೇರ್‌ಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೋರರಾಮ್‌ ಕುಮಾವತ್‌ ಅವರ ಏಜೆಂಟ್‌ ಆಗಿದ್ದ ಶಾಂತಿ ಲಾಲ್‌ ಅವರು ಕ್ಷೇತ್ರದ ಮತಗಟ್ಟೆ ಸಂಖ್ಯೆ 47ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕುಸಿದುಬಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ನಂತರದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ಉದಯಪುರ ಜಿಲ್ಲೆಯಲ್ಲಿ 62 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

               ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಗೆಹಲೋತ್‌ ಅವರು 156 ಸ್ಥಾನಗಳಲ್ಲಿ ಜಯ ಗಳಿಸುವ ಗುರಿ ಹೊಂದಿದ್ದಾರೆ. ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರ ಬದಲಾಗುವ ಕ್ರಮವನ್ನು ಈ ಬಾರಿ ಮುರಿಯುವ ವಿಶ್ವಾಸ ಹೊಂದಿದ್ದಾರೆ. 'ಜನರ ಆಶೀರ್ವಾದ ನಮಗಿದೆ. ಈ ಸಲವೂ ಕಾಂಗ್ರೆಸ್‌, ಸರ್ಕಾರ ರಚಿಸಲಿದೆ' ಎಂದು ಅವರು ಹೇಳಿದರು.

               ಏಳು ಸಂಸದರನ್ನು ಕಣಕ್ಕಿಳಿಸಿರುವ ಬಿಜೆಪಿ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಮಹಿಳೆಯರ ರಕ್ಷಣೆಯಂತಹ ವಿಷಯಗಳನ್ನು ಮತದಾರರ ಮುಂದೆ ಪ್ರಮುಖವಾಗಿ ಇರಿಸಿತ್ತು. ರಾಜಸ್ಥಾನದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಆಡಳಿತಾರೂಢ ಪಕ್ಷವನ್ನು ಜನರು ತಿರಸ್ಕರಿಸಿರುವುದರಿಂದ ಈ ಸಲ ಸರ್ಕಾರ ರಚಿಸುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸದೇ ಇರುವುದರಿಂದ, ಆಂತರಿಕ ಕಲಹದಿಂದ ಬಿಜೆಪಿಯು ತನ್ನ ತಾರಾ ಪ್ರಚಾರಕ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕೆಲ ಮಟ್ಟಿಗೆ ನೆಚ್ಚಿಕೊಳ್ಳಬೇಕಾಯಿತು. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ಕಡೆಗಣಿಸಲಾಗಿದೆ ಎಂದು ಆರಂಭದಲ್ಲಿ ಶಂಕೆ ವ್ಯಕ್ತವಾಗಿದ್ದರೂ ನಂತರದ ಕೆಲ ದಿನಗಳಲ್ಲಿ ಅವರು ಪ್ರಚಾರದಲ್ಲಿ ಪಾಲ್ಗೊಂಡರು.

ಮತಎಣಿಕೆ ಡಿಸೆಂಬರ್‌ 3ರಂದು ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries