ಪತ್ತನಂತಿಟ್ಟ: ಹತ್ತು ದಿನಗಳಲ್ಲಿ 6,24,178 ಭಕ್ತರು ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆ ಭೇಟಿ ನೀಡಿರುವುದಾಗಿ ಅಧಿಕೃತ ಅಂಕಿಅಂಶ ಬಿಡುಗಡೆಗೊಂಡಿದೆ. ಈ ಹತ್ತು ದಿನಗಳಲ್ಲಿ ಶನಿವಾರ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಶನಿವಾರದಂದು ವರ್ಚುವಲ್ ಕ್ಯೂ ಮೂಲಕ ಗರಿಷ್ಠ ಸಂಖ್ಯೆಯ ಜನರು ತಲುಪಿದ್ದಾರೆ. ಶನಿವಾರ 70,000 ಕ್ಕೂ ಹೆಚ್ಚು ಭಕ್ತರು ವರ್ಚುವಲ್ ಸರತಿ ಮೂಲಕ ಭೇಟಿ ನೀಡಿದರು.
ಇಂದು 67,097 ಭಕ್ತರು ವರ್ಚುವಲ್ ಕ್ಯೂ ಮೂಲಕ ದರ್ಶನಕ್ಕಾಗಿ ಕಾಯ್ದಿರಿಸಿದ್ದಾರೆ. ಸದ್ಯದ ಅಂದಾಜಿನ ಪ್ರಕಾರ ಮುಂದಿನ ದಿನಗಳಲ್ಲಿ ಭಕ್ತರ ನೂಕುನುಗ್ಗಲು ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಂಬಾ ಮತ್ತು ಸನ್ನಿಧಾನದಲ್ಲಿ ಭಕ್ತರಿಗೆ ಹೆಚ್ಚಿನ ವ್ಯವಸ್ಥೆ ಮಾಡಲಾಗುತ್ತಿದೆ.
ಬುಕ್ಕಿಂಗ್ ಮೂಲಕವೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ನೂಕುನುಗ್ಗಲು ಪರಿಗಣಿಸಿ ಯಾತ್ರೆಗೆ ಬರುವ ಮಕ್ಕಳಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪಂಬಾದ ಕಾವಲು ಠಾಣೆ ಬಳಿ ಮಹಿಳಾ ಪೋಲೀಸ್ ಅಧಿಕಾರಿಗಳು ಮಕ್ಕಳ ಕೈಗೆ ಟ್ಯಾಗ್ ಕಟ್ಟುತ್ತಿದ್ದಾರೆ. ಜೊತೆಗಿರುವ ವ್ಯಕ್ತಿಯ ಪೋನ್ ಸಂಖ್ಯೆ ಮತ್ತು ಹೆಸರನ್ನು ಬರೆಯಲಾಗುತ್ತದೆ.
ಸನ್ನಿಧಾನಂನಲ್ಲಿ ಅನಿಯಂತ್ರಿತ ಜನದಟ್ಟಣೆಯ ಸಂದರ್ಭದಲ್ಲಿ ಯಾತ್ರಿಕರು ಮಳೆ, ಬಿಸಿಲಿಗೆ ತುತ್ತಾಗದಂತೆ ನಿರ್ಮಿಸುತ್ತಿರುವ ಪಾದಚಾರಿ ಮಾರ್ಗದ ಕಾಮಗಾರಿಯೂ ಸಮಸ್ಯೆ ಸೃಷ್ಟಿಸುತ್ತಿದೆ. ಪಂಬಾದಲ್ಲಿ ಒಂದು ಪಾದಚಾರಿ ಮಾರ್ಗ ಮಾತ್ರ ಪೂರ್ಣಗೊಂಡಿದೆ. ಇನ್ನೂ ಎರಡು ಪಾದಚಾರಿ ಮಾರ್ಗದ ಕೆಲಸ ಬಾಕಿಯುಳಿದಿವೆ.