ಗುವಾಹಟಿ: ನೆರೆಯ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಹಾಗೂ ಬಂಡಾಯ ಗುಂಪುಗಳ ನಡುವೆ ಗುಂಡಿನ ಕಾಳಗ ಜೋರಾಗಿದ್ದು, ಸೋಮವಾರದಿಂದ ಈ ವರೆಗೆ 6 ಸಾವಿರಕ್ಕೂ ಅಧಿಕ ನಾಗರಿಕರು ಹಾಗೂ 45 ಮಿಲಿಟರಿ ಸಿಬ್ಬಂದಿ ಮಿಜೋರಾಂಗೆ ಓಡಿಬಂದಿದ್ದಾರೆ.
ಗಡಿಗೆ ಹೊಂದಿಕೊಂಡಿರುವ ಚಂಫೈ ಜಿಲ್ಲೆಯ ಜೋಕವ್‌ಥಾರ್ ಮತ್ತು ಬುಲ್ಫೆಕ್‌ಜ್ವಾಲ್ ಗ್ರಾಮಗಳಲ್ಲಿ ಮ್ಯಾನ್ಮರ್ ಪ್ರಜೆಗಳಿಗೆ ಆಶ್ರಯ ಒದಗಿಸಲಾಗಿದೆ.
'ಮ್ಯಾನ್ಮಾರ್ ಮಿಲಿಟರಿಯ 45 ಸಿಬ್ಬಂದಿ ಪೊಲೀಸರ ಮುಂದೆ ಶರಣಾದ ನಂತರ ಅವರನ್ನು ಅಸ್ಸಾಂ ರೈಫಲ್ಸ್‌ಗೆ ಒಪ್ಪಿಸಲಾಗಿದೆ' ಎಂದು ಮಿಜೋರಾಂ ಐಜಿಪಿ (ಕೇಂದ್ರಸ್ಥಾನ) ಲಾಲ್‌ಬಿಯಾಖ್ತಾಂಗ್ ಖಿಯಾಂಗ್ತೆ ಅವರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
'ಮ್ಯಾನ್ಮಾರ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 20 ನಾಗರಿಕರು ಗಾಯಗೊಂಡಿದ್ದಾರೆ. ಈ ಪೈಕಿ, ಚಂಫೈನಲ್ಲಿ ಗಾಯಾಳುಯೊಬ್ಬರು ಮೃತಪಟ್ಟಿದ್ದಾರೆ. ಎಂಟು ಜನರನ್ನು ಐಜ್ವಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಹೇಳಿದ್ದಾರೆ.
'ಗುಂಡಿನ ಕಾಳಗ ಮುಂದುವರಿದಿರುವ ಕಾರಣ, ರಾಜ್ಯದೊಳಗೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ' ಎಂದೂ ಅವರು ಹೇಳಿದ್ದಾರೆ.
ಭಾರತ-ಮ್ಯಾನ್ಮಾರ್ ನಡುವಿನ 1,643 ಕಿ.ಮೀ. ಉದ್ದದ ಗಡಿ ಕಾಯುವ ಕಾರ್ಯವನ್ನು ಅಸ್ಸಾಂ ರೈಫಲ್ಸ್ ನಿರ್ವಹಿಸುತ್ತಿದೆ.
ಪ್ರಜಾಪ್ರಭುತ್ವ ಪರ ಹೋರಾಡುವ ಚಿನ್‌ಲ್ಯಾಂಡ್ ರಕ್ಷಣಾ ಪಡೆ (ಸಿಡಿಎಫ್) ಮತ್ತು ಮ್ಯಾನ್ಮಾರ್ ಮಿಲಿಟರಿ ನಡುವೆ ಕಾಳಗ ನಡೆಯುತ್ತಿದೆ.