ರಾಯಪುರ: ಛತ್ತೀಸಗಢ ವಿಧಾನಸಭೆಯ 20 ಕ್ಷೇತ್ರಗಳಲ್ಲಿ ಮಂಗಳವಾರ ನಡೆದ ಮೊದಲ ಹಂತದ ಮತದಾನದಲ್ಲಿ ನಕ್ಸಲರ ಹಿಂಸಾಚಾರ, ಮತದಾನ ಬಹಿಷ್ಕಾರ ಕರೆ ನಡುವೆಯೂ ಶೇ 71.10ರಷ್ಟು ಮತ ಚಲಾವಣೆ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
10 ಕ್ಷೇತ್ರಗಳಲ್ಲಿ ಮತದಾನವು ಬೆಳಿಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ನಡೆದರೆ, ಉಳಿದ 10 ಕ್ಷೇತ್ರಗಳಲ್ಲಿ ಬೆಳಿಗ್ಗೆ 8.15ರಿಂದ ಸಂಜೆ 5ರವರೆಗೆ ನಡೆಯಿತು.
ಈ 20 ಕ್ಷೇತ್ರಗಳಲ್ಲಿ2018ರ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ 2 ಮತ್ತು ಅಜಿತ್ ಜೋಗಿ ಪಕ್ಷವು 1 ಸ್ಥಾನವನ್ನು ಪಡೆದುಕೊಂಡಿತ್ತು.
'ಮೊದಲ ಹಂತದಲ್ಲಿ ಸಂಜೆ 5ರವರೆಗೆ ಶೇ 70.87ರಷ್ಟು ಮತದಾನವಾಗಿದೆ. ಇನ್ನೂ ಕೆಲವು ಮತಗಟ್ಟೆಗಳಿಂದ ಮಾಹಿತಿ ಬರಬೇಕಿರುವುದರಿಂದ ಈ ಅಂಕಿ ಅಂಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ' ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಸಲ ಮೊದಲ 18 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ಶೇ 76.47ರಷ್ಟು ಮತದಾನವಾಗಿತ್ತು. ಈ ವರ್ಷ ಮೊದಲ ಹಂತದಲ್ಲಿ ಇನ್ನೆರಡು ಕ್ಷೇತ್ರಗಳನ್ನು ಸೇರಿಸಲಾಗಿದೆ.
ಬಿಜೆಪಿ ನಾಯಕ ರಮಣ್ ಸಿಂಗ್, ಛತ್ತೀಸಗಢ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್ ಮತ್ತು ಭೂಪೇಶ್ ಬಘೆಲ್ ಅವರ ಸಂಪುಟದ ಕನಿಷ್ಠ ಮೂವರು ಸಚಿವರುಗಳ ಭವಿಷ್ಯವು ಮಂಗಳವಾರ ಇವಿಎಂಗಳಲ್ಲಿ ಭದ್ರವಾಗಿದೆ.
ಸುಕ್ಮಾ, ನಾರಾಯಣ ಪುರ, ಬಿಜಾಪುರ ಮತ್ತು ಕಾಂಕೆರ್ ಜಿಲ್ಲೆಗಳಲ್ಲಿ ಹಿಂಸಾಚಾರ ವರದಿಯಾಗಿದೆ. ಸುಕ್ಮಾ ಜಿಲ್ಲೆಯ ಚಿಂತಾಗುಫ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರೊಂದಿಗೆ ನಡೆದ ಘರ್ಷಣೆಯಲ್ಲಿ ಭದ್ರತಾ ಪಡೆಯ ನಾಲ್ವರು ಗಾಯಗೊಂಡಿದ್ದರೆ, ಇದೇ ಜಿಲ್ಲೆಯ ತೊಂಡಮಾರ್ಕ ಶಿಬಿರದಲ್ಲಿ ಬಳಿ ನಡೆದ ಐಇಡಿ ಸ್ಫೋಟದಲ್ಲಿ ಸಿಆರ್‌ಪಿಎಫ್ ಕಮಾಂಡೊಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾರಾಯಣಪುರ, ಬಿಜಾಪುರ ಮತ್ತು ಕಾಂಕೆರ್ ಜಿಲ್ಲೆಯಲ್ಲೂ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆಯಾದ ವರದಿಯಾಗಿದೆ.
ದೀಪಕ್ ಬೈಜ್ (ಚಿತ್ರಕೂಟ ಕ್ಷೇತ್ರ), ರಾಜ್ಯ ಸಚಿವರುಗಳಾದ ಕವಾಸಿ ಲಖ್ಮ, ಮೋಹನ್ ಮಾರ್ಕಂ ಮತ್ತು ಮೊಹಮದ್ ಅಕ್ಬರ್ ಅವರು ಕಣದಲ್ಲಿದ್ದ ಪ್ರಮುಖರು. ರಾಜ್‌ನಂದಗಾಂವ್‌ನಲ್ಲಿ ರಮಣ್‌ಸಿಂಗ್ ಅವರು ಕಾಂಗ್ರೆಸ್ ನಾಯಕ ಗಿರೀಶ್ ದೇವಾಂಗನ್ ವಿರುದ್ಧ ಸ್ಪರ್ಧಿಸಿದ್ದು ಕವರ್ಧದಲ್ಲಿ ಮತ ಚಲಾಯಿಸಿದರು.
ಎರಡನೇ ಹಂತದಲ್ಲಿ ಉಳಿದ 70 ಕ್ಷೇತ್ರಗಳಿಗೆ ಮತದಾನವು ಇದೇ 17ರಂದು ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.
ಛತ್ತೀಸಗಢದಲ್ಲಿ ಈ ಬಾರಿ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳಷ್ಟೆ ಅಲ್ಲದೆ ಆಪ್ ಸಬ್ಕಿ ಪಾರ್ಟಿ, ಪೀಪಲ್ಸ್ ಪಾರ್ಟಿ ಆಫ್ ಇಂಡಿಯಾ, ಶಕ್ತಿ ಸೇನಾ, ಪ್ರಬುದ್ಧ ರಿಪಬ್ಲಿಕ್ ಪಾರ್ಟಿ, ಸರ್ವಧರ್ಮ ಪಾರ್ಟಿ, ಗಾನ ಸುರಕ್ಷಾ ಪಾರ್ಟಿ ಸೇರಿ 24 ರಷ್ಟು ಪಕ್ಷಗಳು ರಾಜ್ಯದಾದ್ಯಂತ ವಿವಿಧೆಡೆ ಒಂದು ಅಥವಾ ಅದಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಹೊಸ ಮತಗಟ್ಟೆಗಳು: ಬಸ್ತರ್ ವಿಭಾಗದಲ್ಲಿ ಹೊಸದಾಗಿ ಸ್ಥಾಪಿಸಲಾದ 126 ಮತಗಟ್ಟೆಗಳಲ್ಲಿ ಮತದಾರರು ಮತದಾನ ಮಾಡಿದರು. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಇಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಈ ಮೊದಲು ಜನರು ಮತ ಚಲಾಯಿಸಲು ದಟ್ಟ ಅರಣ್ಯದಲ್ಲಿ ಬೆಟ್ಟ, ನದಿಗಳನ್ನು ದಾಟಿ ಮತಗಟ್ಟೆಗಳನ್ನು ತಲುಪಬೇಕಿತ್ತು. ಈಗ ಹೊಸ ಮತಗಟ್ಟೆಗಳ ಸ್ಥಾಪನೆಯಿಂದ ಇಂತಹ ಸಂಕಷ್ಟಗಳು ಇರುವುದಿಲ್ಲ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ.
ಆಯೋಗದ ನಿಯಮದ ಪ್ರಕಾರ ಮತ ಚಲಾಯಿಸಲು ಜನರು 2 ಕಿ.ಮಿ ವ್ಯಾಪ್ತಿಗಿಂತ ಹೆಚ್ಚಿನ ದೂರ ಹೋಗುವಂತಿಲ್ಲ. ಇದರ ಅನ್ವಯವೇ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.
'ಪ್ರಧಾನಿಯಿಂದ ನೀತಿಸಂಹಿತೆ ಉಲ್ಲಂಘನೆ'
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಐದು ವರ್ಷಗಳಿಗೆ ವಿಸ್ತರಿಸುವುದಾಗಿ ಹೇಳಿರುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ. ಅಲ್ಲದೆ ಈ ಬಗ್ಗೆ ಚುನಾವಣಾ ಆಯೋಗದ ಮೊರೆ ಹೋಗುವುದಾಗಿ ತಿಳಿಸಿದೆ.
ಪ್ರಧಾನಿ ಅವರು ಛತ್ತೀಸಗಢದಲ್ಲಿ ಪ್ರಚಾರದ ವೇಳೆ ಈ ಘೋಷಣೆ ಮಾಡಿದ್ದಾರೆ. ಕೇಂದ್ರ ಸಂಪುಟ ಸಭೆಯ ಅನುಮೋದನೆ ಕೂಡ ಇದಕ್ಕೆ ಇನ್ನೂ ಪಡೆದಿಲ್ಲ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.
ಈ ವಿಷಯ ಕುರಿತಂತೆ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮಧ್ಯ ಪ್ರವೇಶಿಸುವಂತೆ ಕೋರುವುದಾಗಿ ತಿಳಿಸಿದರು.
ಆಯೋಗದಿಂದ ಪಕ್ಷವು ಕಾಲಾವಕಾಶವನ್ನು ಕೋರಲಿದೆ. ಆದರೆ ಪ್ರಧಾನಿ ಘೋಷಣೆ ವಿರುದ್ಧ ಆನ್‌ಲೈನ್ ಮೂಲಕ ಕೂಡ ದೂರು ದಾಖಲಿಸಿದೆ. ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ ಎಂದರು.
ಯೋಜನೆಯನ್ನು ಕಾಂಗ್ರೆಸ್ ವಿರೋಧಿಸುವುದಿಲ್ಲ. ಆದರೆ ಚುನಾವಣಾ ಪ್ರಕ್ರಿಯೆ ವೇಳೆ ಈ ಘೋಷಣೆ ಮಾಡಿರುವುದನ್ನು ವಿರೋಧಿಸಲಿವೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
223: ಒಟ್ಟು ಅಭ್ಯರ್ಥಿಗಳು
25: ಮಹಿಳಾ ಅಭ್ಯರ್ಥಿಗಳು
40,78,681: ಒಟ್ಟು ಮತದಾರರು