ಚೆನ್ನೈ: ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಅಂದರೆ ಮೂತ್ರಪಿಂಡ ಕಸಿ. ಹಾನಿಗೊಳಗಾದ ಮೂತ್ರಪಿಂಡಕ್ಕೆ ಬದಲಾಗಿ ಇನ್ನೊಬ್ಬರ ಅಂಗವನ್ನು ಜೋಡಿಸುವ ಈ ಶಸ್ತ್ರಚಿಕಿತ್ಸೆ ಸವಾಲಿನಿಂದ ಕೂಡಿರುತ್ತದೆ. ಇದರಲ್ಲಿ ಯಶಸ್ಸು ಕಾಣುವುದು ಕಷ್ಟಕರ. ವಯಸ್ಸಾದವರ ವಿಷಯದಲ್ಲಂತೂ ಯಶ ಕಾಣುವುದು ವಿರಳ.
ತಮಿಳುನಾಡಿನ ಪ್ರಮುಖ ಮಲ್ಟಿಸ್ಪೆಷಾಲಿಟಿ ಹೆಲ್ತ್‌ಕೇರ್ ಸಮೂಹವಾದ ಕಾವೇರಿ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ವಡಪಳನಿ ಘಟಕದಲ್ಲಿ ಈ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ.
73 ವರ್ಷದ ವ್ಯಕ್ತಿಗೆ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ. 63 ವರ್ಷದ ಪತ್ನಿಯು ಸೂಕ್ತ ದಾನಿಯಾಗಬಹುದು ಎಂದು ಕಂಡುಬಂದ ನಂತರ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ವಯೋವೃದ್ಧ ಮತ್ತು ಅವರ ಕುಟುಂಬದ ವಿವರಗಳನ್ನು ಆಸ್ಪತ್ರೆ ಬಹಿರಂಗಪಡಿಸಿಲ್ಲ.
ದೀರ್ಘಕಾಲದ ಚೇತರಿಕೆಯ ಅವಧಿ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮುಂತಾದ ಕಾರಣಗಳಿಗಾಗಿ ಹಿರಿಯರಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಜಟಿಲ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ, ಮೂತ್ರಪಿಂಡದ ತೊಂದರೆಗಳನ್ನು ಹೊಂದಿರುವ ವಯಸ್ಸಾದ ರೋಗಿಗಳು ಡಯಾಲಿಸಿಸ್ ಮತ್ತು ದೀರ್ಘಾವಧಿಯ ಔಷಧಿ ಮೂಲಕವೇ ನಿರ್ವಹಣೆಗೆ ಒಳಪಡುತ್ತಾರೆ. ಆದರೆ, ಕಾವೇರಿ ಆಸ್ಪತ್ರೆಯಲ್ಲಿ ವಯೋವೃದ್ಧರಿಗೆ ಈಗ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡಿರುವುದು ಅಪರೂಪದ ಪ್ರಕರಣವಾಗಿದೆ. ಶಸ್ತ್ರಚಿಕಿತ್ಸೆಯನ್ನು ನಿಖರವಾಗಿ ಮತ್ತು ಕಾಳಜಿಯೊಂದಿಗೆ ಕಾರ್ಯಗತಗೊಳಿಸಲಾಗಿದೆ.
'ಈ ಯಶಸ್ವಿ ಮೂತ್ರಪಿಂಡ ಕಸಿಯು ವೈದ್ಯಕೀಯ ವಲಯದ ಪ್ರಗತಿಗೆ ಸಾಕ್ಷಿಯಾಗಿದೆ. ನಮ್ಮ ರೋಗಿ ಮತ್ತು ಅವರ ಕುಟುಂಬದ ನಿರಂತರ ಮನೋಭಾವಕ್ಕೆ ಸಾಕ್ಷಿಯಾಗಿದೆ. ರೋಗಿಗಳ ಜೀವನದ ಗುಣಮಟ್ಟ, ನಾವು ಹಿರಿಯ ಆರೋಗ್ಯ ರಕ್ಷಣೆಗೆ ಹೇಗೆ ಕಾಳಜಿ ತೋರುತ್ತೇವೆ ಎಂಬುದನ್ನು ಸೂಚಿಸುತ್ತದೆ' ಎಂದು ಹಿರಿಯ ಸಲಹೆಗಾರ ಮತ್ತು ಮಲ್ಟಿಆರ್ಗಾನ್ ಟ್ರಾನ್ಸ್‌ಪ್ಲಾಂಟ್ (ಯಕೃತ್ತು, ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿ) ತಜ್ಱ ಡಾ. ಸ್ವಾಮಿನಾಥನ್ ಸಂಬಂದಮ್ ಹೇಳಿದ್ದಾರೆ.
ಕಾವೇರಿ ಆಸ್ಪತ್ರೆಗಳ ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅರವಿಂದನ್ ಸೆಲ್ವರಾಜ್ ಅವರು ಈ ಮೈಲಿಗಲ್ಲಿನಲ್ಲಿ ಆಸ್ಪತ್ರೆಯ ಪಾತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.