ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯ 230 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 76.22 ರಷ್ಟು ಮತದಾನ ಆಗಿದೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಇಷ್ಟು ಪ್ರಮಾಣದ ಮತದಾನ ಆಗಿರಲಿಲ್ಲ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯ 230 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 76.22 ರಷ್ಟು ಮತದಾನ ಆಗಿದೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಇಷ್ಟು ಪ್ರಮಾಣದ ಮತದಾನ ಆಗಿರಲಿಲ್ಲ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಶೇ 75.63ರಷ್ಟು ಮತದಾನ ಆಗಿತ್ತು.
ಛತ್ತೀಸಗಢ ಮತ್ತು ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ನಕ್ಸಲ್‌ಪೀಡಿತ ಪ್ರದೇಶ ಬಲಾಘಾಟ್ ಜಿಲ್ಲೆಯಲ್ಲಿ ಶೇ 85.23 ರಷ್ಟು ಮತದಾನವಾಗಿದೆ. ಮಾವೊವಾದಿಗಳು ಮತ ಹಾಕದಂತೆ ಜನರಿಗೆ ಕೋರಿದ್ದರೂ ಇಲ್ಲಿ ಹೆಚ್ಚು ಮತದಾನ ಆಗಿದೆ.
2003ರಿಂದ ಇಲ್ಲಿ ಬಿಜೆಪಿ ಮೂರು ಸಲ ಚುನಾವಣೆಯಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಒಂದು ಬಾರಿ ಜಯ ಗಳಿಸಿತ್ತು. ಶುಕ್ರವಾರ ನಡೆದ ಚುನಾವಣೆಯು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್ ಸೇರಿದಂತೆ 2533 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದೆ.
ವಶ: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ನಗದು, ಆಭರಣ, ಮಾದಕ ವಸ್ತು ಸೇರಿ ಒಟ್ಟು ₹ 340 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯದ ಮುಖ್ಯ ಚನಾವಣಾ ಅಧಿಕಾರಿ ಅನುಪಮ್ ರಾಜನ್ ತಿಳಿಸಿದ್ದಾರೆ.