ಕರಾಚಿ: ಕರಾಚಿಯ ಮಲಿರ್ ಜೈಲಿನಲ್ಲಿದ್ದ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ.
ಅಕ್ರಮ ವಿದೇಶಿ ವಲಸಿಗರು ಮತ್ತು ಪ್ರಜೆಗಳನ್ನು ದೇಶದಿಂದ ಹೊರಹಾಕಲು ಪಾಕಿಸ್ತಾನ ಸರ್ಕಾರವು ನಡೆಸುತ್ತಿರುವ ಅಭಿಯಾನದಜ ಅಡಿಯಲ್ಲಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ.ಭಾರತೀಯ ಮೀನುಗಾರರನ್ನು ಅಲ್ಲಮ ಇಕ್ಬಾಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾರೀ ಭದ್ರತೆಯೊಂದಿಗೆ ಕಳುಹಿಸಲಾಗುತ್ತಿದ್ದು, ಅವರು ನಾಳೆ ಲಾಹೋರ್ ತಲುಪಲಿದ್ದಾರೆ. ಅಲ್ಲಿಂದ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ಮೀನುಗಾರರು ಲಾಹೋರ್‌ಗೆ ಪ್ರಯಾಣಿಸಲು ವ್ಯವಸ್ಥೆ ಮಾಡಿದ ಈಧಿ ವೆಲ್ಫೇರ್ ಟ್ರಸ್ಟ್‌ನ ಫೈಸಲ್ ಈಧಿ ಅವರು ಮಾತನಾಡಿ, ಬಹುತೇಕ ಬಡವರಾಗಿರುವ ಭಾರತೀಯ ಮೀನುಗಾರರು ಅಂತಿಮವಾಗಿ ತಮ್ಮ ಮನೆಗೆ ಮರಳುತ್ತಿರುವುದು ಸಂತೋಷದ ವಿಚಾರ ಎಂದಿದ್ದಾರೆ.
"ಭಾರತೀಯ ಮೀನುಗಾರರು ಶೀಘ್ರದಲ್ಲೇ ತಮ್ಮ ಕುಟುಂಬಗಳನ್ನು ಸೇರಿಕೊಳ್ಳಲಿದ್ದಾರೆ. ನಾವು ಅವರಿಗೆ ಮನೆಗೆ ತೆಗೆದುಕೊಂಡು ಹೋಗಲು ಹಣ ಮತ್ತು ಇತರ ಉಡುಗೊರೆಗಳನ್ನು ನೀಡಿದ್ದೇವೆ" ಎಂದು ಅವರು ಹೇಳಿದ್ದಾರೆ.
ಕೆಲವು ಕಡೆ ಕಳಪೆಯಾಗಿ ಗುರುತಿಸಲಾದ ಸಮುದ್ರ ಗಡಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ಮತ್ತು ಭಾರತ ಪರಸ್ಪರರ ಮೀನುಗಾರರನ್ನು ನಿಯಮಿತವಾಗಿ ಬಂಧಿಸುತ್ತವೆ.