ಅಹಮದಾಬಾದ್: ಪಾಕಿಸ್ತಾನದ ಜೈಲಿನಿಂದ ಭಾರತದ 80 ಮಂದಿ ಮೀನುಗಾರರನ್ನು ಬಿಡುಗಡೆ ಮಾಡಲಾಗಿದ್ದು, ದೀಪಾವಳಿ ಹಬ್ಬದ ದಿನ ಅವರು ತಮ್ಮ ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ.
ಕರಾಚಿ ಜೈಲಿನಿಂದ ಬಿಡುಗಡೆಯಾದ ಮೀನುಗಾರರು ರೈಲಿನ ಮೂಲಕ ಭಾನುವಾರ ಗುಜರಾತ್‌ನ ವಡೋದರಕ್ಕೆ ತಲುಪಿದ್ದಾರೆ.
ಗುರುವಾರವೇ ಜೈಲಿನಿಂದ ಬಿಡುಗಡೆಯಾದ ಯೋಧರನ್ನು ಶುಕ್ರವಾರ ಗುಜರಾತ್‌ನ ಮೀನುಗಾರಿಕೆ ಇಲಾಖೆಯ ತಂಡಕ್ಕೆ ಅಟ್ಟಾರಿ-ವಾಘಾ ಗಡಿಯಲ್ಲಿ ಹಸ್ತಾಂತರಿಸಲಾಗಿತ್ತು.
2020ರಲ್ಲಿ ಎಂದಿನಂತೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರನ್ನು ಸಮುದ್ರ ಗಡಿ ಮೀರಿದ ಆರೋಪ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿ ಕರೆದೊಯ್ದಿದ್ದರು.
ಬಿಡುಗಡೆಯಾದ 80 ಮಂದಿ ಮೀನುಗಾರರ ಪೈಕಿ 59 ಮಂದಿ ಗಿರ್ ಸೋಮನಾಥ್ ಜಿಲ್ಲೆಯವರಾದರೆ, 15 ಮಂದಿ ದೇವಭೂಮಿ ದ್ವಾರಕಾಗೆ ಸೇರಿದವರು, ಇಬ್ಬರು ಜಾಮ್‌ನಗರ ಮತ್ತು ಒಬ್ಬರು ಅಮ್ರೇಲಿ ಮೂಲದವರಾಗಿದ್ದಾರೆ. ಇನ್ನುಳಿದ ಮೂವರು ಕೇಂದ್ರಾಡಳಿತ ಪ್ರದೇಶ ದಿಯುಗೆ ಸೇರಿದವರಾಗಿದ್ದಾರೆ.
' 2020ರಲ್ಲಿ ಈ ಎಲ್ಲ ಮೀನುಗಾರನ್ನು ಬಂಧಿಸಲಾಗಿತ್ತು. 200 ಮೀನುಗಾರರು ಇನ್ನೂ ಪಾಕಿಸ್ತಾನದ ಜೈಲುಗಳಲ್ಲಿದ್ದಾರೆ. ಬಿಡುಗಡೆಯಾದ ಮೀನುಗಾರರು ತಮ್ಮ ಕುಟುಂಬದ ಜೊತೆ ದೀಪಾವಳಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ.
ಈ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ಪಾಕಿಸ್ತಾನವು 400 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿತ್ತು.