ನವದೆಹಲಿ: ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ ₹50,000 ಕೋಟಿ ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಆಕರ್ಷಿಸಿದೆ. ಸರ್ಕಾರದ ಕೈಗಾರಿಕಾ ಪರ, ರೈತ ಪರ ನೀತಿಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿಳಿಸಿದರು.

ಭಾರತ ಮಂಟಪದಲ್ಲಿ ವರ್ಲ್ಡ್ ಫುಡ್ ಇಂಡಿಯಾದ ಎರಡನೇ ಆವೃತ್ತಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಆಹಾರ ಸಂಸ್ಕರಣೆ ಕ್ಷೇತ್ರದ ಸಾಮರ್ಥ್ಯವು 12 ಲಕ್ಷ ಟನ್‌ನಿಂದ 200 ಲಕ್ಷ ಟನ್‌ಗೆ ಹೆಚ್ಚಳವಾಗಿದೆ. ಸಂಸ್ಕರಿಸಿದ ಆಹಾರದ ರಫ್ತು ಪ್ರಮಾಣವು ಶೇ 150ರಷ್ಟು ಬೆಳವಣಿಗೆ ಹೊಂದಿದೆ ಎಂದು ಹೇಳಿದರು.
ಸರ್ಕಾರದ ಬಂಡವಾಳ ಸ್ನೇಹಿ ನೀತಿಗಳು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಕಳೆದ 9 ವರ್ಷಗಳಲ್ಲಿ ಒಟ್ಟು ಕೃಷಿ ಉತ್ಪನ್ನ ರಫ್ತಿನ ಪೈಕಿ ಸಂಸ್ಕರಿಸಿದ ಆಹಾರದ ರಫ್ತು ಪ್ರಮಾಣ ಶೇ 13ರಿಂದ 23ಕ್ಕೆ ಹೆಚ್ಚಳವಾಗಿದೆ ಎಂದು ಹೇಳಿದರು.
ಆಹಾರ ಸಂಸ್ಕರಣೆ ಕ್ಷೇತ್ರವನ್ನು ಮುನ್ನಡೆಸುವ ಸಾಮರ್ಥ್ಯ ದೇಶದ ಮಹಿಳೆಯರಲ್ಲಿ ಇದೆ ಎಂದೂ ತಿಳಿಸಿದರು.
ಮೂರು ದಿನಗಳ ಕಾರ್ಯಕ್ರಮವು ನ.5ರಂದು ಮುಕ್ತಾಯಗೊಳ್ಳಲಿದೆ. ಕಾರ್ಯಕ್ರಮದಲ್ಲಿ 80 ದೇಶಗಳು, 200 ಭಾಷಣಕಾರರು ಮತ್ತು 12 ಪಾಲುದಾರ ಸಚಿವಾಲಯಗಳು, ಇಲಾಖೆಗಳು ಭಾಗವಹಿಸಲಿವೆ.
ಕಾರ್ಯಕ್ರಮವು, ಭಾರತವನ್ನು 'ಜಗತ್ತಿನ ಆಹಾರದ ಬುಟ್ಟಿ'ಯಾಗಿ ತೋರಿಸುವ ಮತ್ತು ಪ್ರಸಕ್ತ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಆಚರಿಸುವ ಉದ್ದೇಶ ಹೊಂದಿದೆ. ಮೊದಲ ಆವೃತ್ತಿಯು 2017ರಲ್ಲಿ ನಡೆದಿತ್ತು. ಕೊರೊನಾ ಸಾಂಕ್ರಾಮಿಕ ಕಾರಣದಿಂದ ನಂತರದ ವರ್ಷಗಳಲ್ಲಿ ಕಾರ್ಯಕ್ರಮ ಆಯೋಜನೆಯಾಗಿರಲಿಲ್ಲ.