ಬದಿಯಡ್ಕ: ಹಿರಿಯರ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಮಕ್ಕಳು ಸಮಾಜದಲ್ಲಿ ಬೆಳೆದುಬರುವಂತಾಗಬೇಕು. ಅದಕ್ಕಾಗಿ ನಮ್ಮ ಮಕ್ಕಳಿಗೆ ತಾಯಿಯೇ ಗುರುವಾಗಿ ಉತ್ತಮ ಸಂಸ್ಕಾರ ನೀಡುವ ಕಾರ್ಯವನ್ನು ಮಾಡಬೇಕು. ಸೇವಾಕಾರ್ಯಗಳಿಗೆ ರಾಜಕೀಯವೊಂದೇ ವೇದಿಕೆಯಲ್ಲ ಎಂಬುದನ್ನು ನಾವು ಇಲ್ಲಿಕಾಣಬಹುದಾಗಿದೆ ಎಂದು ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಅಭಿಪ್ರಾಯಪಟ್ಟರು.
ಕಿಳಿಂಗಾರು ಸಾಯಿಮಂದಿರದಲ್ಲಿ ಗುರುವಾರ ಜರಗಿದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 98ನೇ ಜನ್ಮದಿನಾಚರಣೆಯ ಸಂದರ್ಭ ಬಡಜನತೆಗೆ ಕಿಳಿಂಗಾರು ದಿ.ಸಾಯಿರಾಂ ಭಟ್ ಮನೆಯವರು ನೀಡುವ ಹೊಲಿಗೆಯಂತ್ರ ವಿತರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಗಮಯೀ ಜೀವನ, ಸ್ನೇಹಮಯೀ ವ್ಯಕ್ತಿತ್ವವನ್ನು ರೂಪಿಸಬೇಕು. ಸೇವಾಕಾರ್ಯದಿಂದ ಭಗವಂತನು ತೃಪ್ತಿಯನ್ನು ಹೊಂದುತ್ತಾನೆ. ದಿವಂಗತ ಸಾಯಿರಾಂ ಭಟ್ ಅವರ ಸೇವಾಕಾರ್ಯಗಳು ಇನ್ನೂ ನಿರಂತರ ಮುಂದುವರಿಯುವಂತಾಗಲಿ ಎಂದರು.
ಸಾಯಿರಾಂ ಕೃಷ್ಣ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಹಿರಿಯರ ಮನೋಭಿಲಾಷೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಮಹದಾಸೆಯಿದೆ ಎಂದರು. ಒಟ್ಟು ಆರುಮಂದಿಗೆ ಹೊಲಿಗೆ ಯಂತ್ರ, ತಲಾ ಒಬ್ಬರಿಗೆ ಮನೆ ದುರಸ್ಥಿ, ಚಿಕಿತ್ಸೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ವಿತರಿಸಲಾಯಿತು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಪ್ರಬಂಧÀಕ ಜಯದೇವ ಖಂಡಿಗೆ, ಬದಿಯಡ್ಕ ಗ್ರಾಮಪಂಚಾಯತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಜನಪ್ರತಿನಿಧಿಗಳಾದ ಶ್ಯಾಮಪ್ರಸಾದ ಮಾನ್ಯ, ಡಿ.ಶಂಕರ, ಸೌಮ್ಯಾ ಮಹೇಶ್ ನಿಡುಗಳ, ಅಶ್ವಿನಿ ಎಂ. ನೀರ್ಚಾಲು, ಲಲಿತಾ ಟೀಚರ್, ರೇವತಿ ಟೀಚರ್, ಶಾರದಾ ಸಾಯಿರಾಂ ಭಟ್, ಶೀಲಾ ಕೆ.ಎನ್.ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಎನ್.ಸುಬ್ರಾಯ ಭಟ್ ವಂದಿಸಿದರು. ಮಧ್ಯಾಹ್ನ ನೂರಾರು ಮಂದಿ ಸಾಯಿರಾಂ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ವೆಂಕಟೇಶ್ ರಾವ್ ಮಂಗಳೂರು ತಂಡದವರು ಭಜನಾ ಸೇವೆ ನಡೆಸಿಕೊಟ್ಟರು.