ಲಾಹೋರ್: ವಿಷಕಾರಿ ಹೊಗೆಯಿಂದಾಗಿ ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಲಾಹೋರ್‌ನಲ್ಲಿ ಸಾವಿರಾರು ಜನರು ಅಸ್ವಸ್ಥಗೊಂಡಿದ್ದು, ಶಾಲೆಗಳು, ಮಾರುಕಟ್ಟೆಗಳು ಮತ್ತು ಉದ್ಯಾನಗಳನ್ನು ನಾಲ್ಕು ದಿನಗಳ ಕಾಲ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ದೇಶದ ಎರಡನೇ ಅತಿದೊಡ್ಡ ನಗರವಾದ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರ ಎಂದು ಪದೇ ಪದೆ ಸ್ಥಾನ ಪಡೆದಿದೆ. ಇದೀಗ, ಹೊಗೆಯನ್ನು ಕಡಿಮೆ ಮಾಡಲೆಂದು ಅಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಮುಖಕ್ಕೆ ಮಾಸ್ಕ್ ಧರಿಸಿ ಮನೆಯಲ್ಲೇ ಇರುವಂತೆ ವೈದ್ಯರು ಜನರಿಗೆ ಸಲಹೆ ನೀಡಿದ್ದಾರೆ. ಅನೇಕ ಜನರಿಗೆ ಕೆಮ್ಮು ಮತ್ತು ಉಸಿರಾಟದ ತೊಂದರೆ ಎದುರಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.
ಉಸಿರಾಟ ಸಂಬಂಧಿತ ಕಾಯಿಲೆಗಳು, ಕಣ್ಣುಗಳಲ್ಲಿನ ಸೋಂಕುಗಳು ಮತ್ತು ಚರ್ಮದ ಕಾಯಿಲೆಗಳೊಂದಿಗೆ ಆಸ್ಪತ್ರೆಗಳಿಗೆ ಧಾವಿಸುವುದನ್ನು ತಪ್ಪಿಸಲು ಮಾಸ್ಕ್ ಧರಿಸುವುದು ಮತ್ತು ಮನೆಯಲ್ಲಿಯೇ ಇರುವುದು ಎರಡು ಸುಲಭವಾದ ಪರಿಹಾರಗಳಾಗಿವೆ ಎಂದು ಲಾಹೋರ್‌ನ ಮುಖ್ಯ ಮೇಯೊ ಆಸ್ಪತ್ರೆಯ ವೈದ್ಯ ಸಲ್ಮಾನ್ ಕಾಜ್ಮಿ ಹೇಲಿದ್ದಾರೆ.
ಕಳೆದ ಒಂದು ವಾರದಲ್ಲಿ ಅಂತಹ ಕಾಯಿಲೆಗಳಿಗೆ ಸಾವಿರಾರು ಜನರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಗುರುವಾರ, ಗಾಳಿಯಲ್ಲಿ PM 2.5 ಅಥವಾ ಸಣ್ಣ ಕಣಗಳ ಸಾಂದ್ರತೆಯು 450ಕ್ಕೆ ತಲುಪಿದೆ. ಇದನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಚಳಿಗಾಲದಲ್ಲಿ ಗೋಧಿ ನಾಟಿ ಮಾಡುವ ಋತುವಿನ ಆರಂಭದಲ್ಲಿ ಬೆಳೆ ತ್ಯಾಜ್ಯವನ್ನು ಸುಡುವುದೇ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ.
16 ರಿಂದ 19ನೇ ಶತಮಾನದ ಮೊಘಲರ ಆಳ್ವಿಕೆಯಲ್ಲಿ ಲಾಹೋರ್ ಅನ್ನು ಉದ್ಯಾನಗಳ ನಗರ ಎಂದು ಕರೆಯಲಾಗುತ್ತಿತ್ತು. ಆದರೆ, ಕ್ಷಿಪ್ರ ನಗರೀಕರಣ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಬೆಳವಣಿಗೆಯು ನಗರದಲ್ಲಿ ಹಸಿರನ್ನು ಕಡಿಮೆಯಾಗಿಸಿದೆ.