ಎಜಿಮಲ: ಕೊಚ್ಚಿ ಶಿಪ್‍ಯಾರ್ಡ್‍ನಲ್ಲಿ ಮುಂದಿನ ವಿಮಾನವಾಹಕ ನೌಕೆ ನಿರ್ಮಿಸುವಂತೆ ರಕ್ಷಣಾ ಕಾರ್ಯದರ್ಶಿ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿ ಶಿಫಾರಸು ಮಾಡಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅಡ್ಮಿರಲ್ ಆರ್. ಹರಿಕುಮಾರ್ ತಿಳಿಸಿರುವರು.
ಎಜಿಮಲ ಇಂಡಿಯನ್ ನೇವಲ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದ ಕೆಡೆಟ್‍ಗಳ ಪಾಸಿಂಗ್ ಔಟ್ ಪರೇಡ್‍ನಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕೇವಲ ಏಳು ದೇಶಗಳು ವಿಮಾನವಾಹಕ ನೌಕೆಗಳನ್ನು ನಿರ್ಮಿಸುವ ಸಾಮಥ್ರ್ಯವನ್ನು ಹೊಂದಿವೆ. ಐಎನ್ ಎಸ್ ವಿಕ್ರಾಂತ್ ಅನ್ನು ಕೊಚ್ಚಿ ಶಿಪ್‍ಯಾರ್ಡ್ ನಿರ್ಮಿಸಿದೆ. ಇದು ವಿಮಾನವಾಹಕ ನೌಕೆಯನ್ನು ನಿರ್ಮಿಸುವ ತಾಂತ್ರಿಕ ಸಾಮಥ್ರ್ಯವನ್ನು ಹೊಂದಿದೆ. ಹೊಸ ಕೆಲಸ ಕೊಡದಿದ್ದರೆ ಕೌಶಲ್ಯ ಕಳೆದು ಹೋಗುತ್ತದೆ. ನಮಗೆ ಮೂರು ವಿಮಾನವಾಹಕ ನೌಕೆಗಳು ಬೇಕಾಗಿರುವುದರಿಂದ, ಇನ್ನೂ ಒಂದನ್ನು ನಿರ್ಮಿಸಲಾಗುತ್ತಿದೆ.
ವಿಶ್ವದ ರಾಷ್ಟ್ರಗಳ ನಡುವೆ ಭಾರತ ಮುನ್ನಡೆಯುತ್ತಿದ್ದು, 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಸಿದ್ಧತೆ ನಡೆಸಿದೆ ಎಂದರು. ಈಗ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ದೇಶದ ಬೆಳವಣಿಗೆ ಎದ್ದು ಕಾಣುತ್ತಿದೆ ಎಂದು ನೌಕಾಪಡೆ ಮುಖ್ಯಸ್ಥರು ಹೇಳಿದರು.
159 ಕೆಡೆಟ್‍ಗಳು ತರಬೇತಿ ಪೂರ್ಣಗೊಳಿಸಿದ್ದಾರೆ. ಐದು ವಿದೇಶಗಳ ಎಂಟು ಕೆಡೆಟ್‍ಗಳು ತರಬೇತಿಯನ್ನು ಪೂರ್ಣಗೊಳಿಸಿದರು. ನೌಕಾಪಡೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಎಜಿಮಲ ಅಕಾಡೆಮಿಯಿಂದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ವಿದೇಶಿ ಮಹಿಳೆ ಕೂಡ ಪರೇಡ್‍ನಲ್ಲಿ ಭಾಗವಹಿಸಿದರು. ಮಾರಿಷಸ್ ನ ಜುಗ್ಮಾ ಪ್ರಸಿತಾ ಪರೇಡ್ ನಲ್ಲಿ ಭಾಗವಹಿಸಿದ್ದರು.
ದಕ್ಷಿಣ ನೌಕಾಪಡೆಯ ಮುಖ್ಯಸ್ಥ ವೈಸ್ ಅಡ್ಮಿರಲ್ ಎಂ.ಎ. ಹಂಪಿಹೊಳಿ, ನೇವಲ್ ಅಕಾಡೆಮಿ ಕಮಾಂಡೆಂಟ್ ಪುನೀತ್ ಕೆ. ಬಾಲ್ ಭಾಗವಹಿಸಿದ್ದರು. ವಿವಿಧ ಕೋರ್ಸ್‍ಗಳ ಪದವೀಧರರ ಪದವಿ ಪ್ರದಾನ ಸಮಾರಂಭದಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್. ಉಣ್ಣಿಕೃಷ್ಣನ್ ನಾಯರ್ ಮುಖ್ಯ ಅತಿಥಿಯಾಗಿದ್ದರು. ಪರೇಡ್ ವೀಕ್ಷಿಸಲು ಕೆಡೆಟ್‍ಗಳ ಪೋಷಕರು, ಕುಟುಂಬ ಸದಸ್ಯರು ಸೇರಿದಂತೆ ಹಲವರು ಆಗಮಿಸಿದ್ದರು.