ಚೆನ್ನೈ: ಈಶಾನ್ಯ ಮಾರುತಗಳು ಬಿರುಸುಗೊಂಡಿದ್ದು, ತಮಿಳುನಾಡಿನ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಅದರಲ್ಲೂ ದಕ್ಷಿಣದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.
ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಮಧುರೈ, ಥೇಣಿ, ದಿಂಡಿಗಲ್, ತಿರುನಲ್ವೇಲಿ, ತೆಂಕಶಿ, ತಿರುಪ್ಪೂರ್ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲದೆ ನೀಲಗಿರಿ ಜಿಲ್ಲೆಯ ನಾಲ್ಕು ತಾಲೂಕುಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರವು(ಆರ್‌ಎಂಸಿ), ರಾಜ್ಯದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ನವೆಂಬರ್ 8ರಂದು ಸಂಜೆ 5.30ಕ್ಕೆ ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ. ಈ ಮಾರುತಗಳು ಪಶ್ಚಿಮಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ನೀಲಗಿರಿ ಜಿಲ್ಲೆಯ ಕೋಟಗಿರಿಯಲ್ಲಿ 228 ಮಿಮೀ ಮಳೆಯಾಗಿದ್ದು, ಅಗ್ರಸ್ಥಾನದಲ್ಲಿದೆ.
ನಿರಂತರ ಮಳೆಯಿಂದಾಗಿ ನೀಲಗಿರಿ ಮೌಂಟೇನ್ ರೈಲ್ವೆ ಮಾರ್ಗದಲ್ಲಿ ಸುಮಾರು ಐದು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದ್ದು, ಪರ್ವತ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ. ಕೋಟಗಿರಿಯಲ್ಲೂ ಭೂಕುಸಿತ ಸಂಭವಿಸಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಕೂನೂರು ಮಾರ್ಗವಾಗಿ ಮೆಟ್ಟುಪಾಳ್ಯಂಗೆ ಸಂಚಾರವನ್ನು ಬದಲಿಸಲಾಗಿದೆ.
ಆರ್‌ಎಂಸಿ ಪ್ರಕಾರ, ತೆಂಕಶಿ, ಥೇಣಿ, ದಿಂಡಿಗಲ್, ಮಧುರೈ, ವಿರುಧುನಗರ, ತಿರುನಲ್ವೇಲಿ, ತೂತುಕುಡಿ, ಶಿವಗಂಗಾ, ರಾಮನಾಥಪುರಂ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಣ್ಣಾಮಲೈ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಸಾಧಾರಣ ಗುಡುಗು ಸಹಿತ ಮಳೆಯಾಗಿದೆ.
ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮಳೆಯಾಗಿದೆ.