ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಹಣ ದುರುಪಯೋಗ ಪ್ರಕರಣದ ವಿಚಾರಣೆ ನಡೆಸುತ್ತಿರುವ ಗುಜರಾತ್ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಎಸ್.ಕೆ. ಕೌಲ್ ನೇತೃತ್ವದ ಮೂವರು ನ್ಯಾಯಮೂರ್ತಿಗಳಿದ್ದ ಪೀಠವು, ತೀಸ್ತಾ ಅವರ ನಿರೀಕ್ಷಣಾ ಜಾಮೀನು ಸಂಬಂಧ ಮಧ್ಯಪ್ರವೇಶಿಸಲು ನಿರಾಕರಿಸಿ, ಗುಜರಾತ್ ಪೊಲೀಸರು ನಡೆಸುತ್ತಿರುವ ತನಿಖೆಗೆ ಸಹಕರಿಸುವಂತೆ ನಿರ್ದೇಶಿಸಿದೆ.
ತೀಸ್ತಾ ದಂಪತಿಯು ತನಿಖೆಗೆ ಸಹಕರಿಸುತ್ತಿಲ್ಲವೆಂದು ಗುಜರಾತ್ ಪೊಲೀಸರ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ. ರಾಜು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೆಟಲ್ವಾಡ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಸಾಮಾಜಿಕ ಕಾರ್ಯಕರ್ತೆ ಈ ವಿಷಯದಲ್ಲಿ ಪೊಲೀಸರಿಗೆ ಸಹಕರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
2008 ಮತ್ತು 2013ರ ನಡುವೆ ತಮ್ಮ ಎನ್‌ಜಿಒ ಸಬ್ರಂಗ್ ಟ್ರಸ್ಟ್ ಮೂಲಕ ಕೇಂದ್ರ ಸರ್ಕಾರದಿಂದ ₹1.4 ಕೋಟಿ ಅನುದಾನವನ್ನು ಸೆಟಲ್ವಾಡ್ ಮತ್ತು ಆನಂದ್ ದಂಪತಿ ಪಡೆದುಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅಹಮದಾಬಾದ್ ಪೋಲಿಸ್ ಅಪರಾಧ ವಿಭಾಗವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.