ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಸುಧಾರಿಸಲು ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದರು.
ನವಕೇರಳ ವೇದಿಕೆಯ 2ನೇ ದಿನವಾದ ಭಾನುವಾರದಂದು ಕಾಸರಗೋಡು ವಿಶ್ರಾಂತಿ ಗೃಹದಲ್ಲಿ ಉಪಹಾರಕ್ಕೆ ಆಹ್ವಾನಿಸಿದ ಅತಿಥಿಗಳು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳಿಗೆ ಉತ್ತರ ನೀಡಿ ಅವರು ಮಾತನಾಡಿದರು. ಕಾಸರಗೋಡು ಕ್ಷೇತ್ರವು ರಾಜ್ಯದ ಪ್ರಮುಖ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ. ಅವುಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಬಗ್ಗೆ ಹೆಚ್ಚು ಚಿಂತಿತರಾಗದೆ, ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವತ್ತ ನಾವು ಗಮನಹರಿಸಬೇಕಾಗಿದೆ. ಆಧುನಿಕ ಕೋರ್ಸ್‍ಗಳು ಮತ್ತು ಉತ್ತಮ ಸೌಲಭ್ಯಗಳನ್ನು ಖಾತ್ರಿಪಡಿಸಿದರೆ, ಮಕ್ಕಳು ದೇಶದಲ್ಲೇ ಒದು ಮುಂದುವರಿಸುತ್ತಾರೆ. ಅಷ್ಟೇ ಅಲ್ಲ ಅನ್ಯಸ್ಥಳದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾಸರಗೋಡು ಎಚ್.ಎ. ಎಲ್‍ಗಾಗಿ ಖರೀದಿಸಿರುವ ಭೂಮಿಯಲ್ಲಿ ಭವಿಷ್ಯದಲ್ಲಿ ಏನು ಮಾಡಬಹುದು ಎಂಬುದನ್ನು ಪರಿಶೀಲಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದ ಸಹಾಯವನ್ನೂ ಯಾಚಿಸಲಾಗುವುದು. ಕೃಷಿ ಉತ್ಪನ್ನಗಳನ್ನು ಸೂಕ್ತರೀತಿ ದಾಸ್ತಾನಿರಿಸುವ, ಮಾರುಕಟ್ಟೆಗೆ ತಲುಪಿಸುವ ಹಾಗೂ ಸಮಯಕ್ಕೆ ಸರಿಯಾಗಿ ರಫ್ತು ಮಾಡುವ ಎಲ್ಲ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಇದರೊಂದಿಗೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯೂ ನಡೆಯುತ್ತಿದೆ.
ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಜನರು ಉಚಿತ ಚಿಕಿತ್ಸೆ ಪಡೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ,. ಜಿಲ್ಲೆಯಲ್ಲಿ ಕ್ರೀಡಾ ಹಾಸ್ಟೆಲ್ ಇಲ್ಲದ ಸಮಸ್ಯೆ ಬಗೆಹರಿಯಲಿದೆ.
ಮುಖ್ಯಮಂತ್ರಿ ಜತೆ ಬೆಳಗ್ಗಿನ ಉಪಾಹಾರದಲ್ಲಿ ಪಾಲ್ಗೊಂಡಿದ್ದವರಲ್ಲಿ 28ಮಂದಿ ಖುದ್ದಾಗಿ ಅಭಿಪ್ರಾಯಗಳನ್ನು ಮಂಡಿಸಿದರು.
ಚಿನ್ಮಯಾನಂದ ಮಿಷನ್ ಕೇರಳ ಪ್ರಾದೇಶಿಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ, ಕಾಸರಗೋಡು ಚೆರ್ಕಳ ಮಾರ್ಥೋಮಾ ವಿಶೇಚ ವಿದ್ಯಾಲಯದ ಆಡಳಿತಾಧಿಕಾರಿ ಫಾದರ್ ಮ್ಯಾಥ್ಯೂ ಬೇಬಿ, ಕೇರಳ ಮುಸ್ಲಿಂ ಜಮಾತ್ ಪ್ರತಿನಿಧಿಸಿ ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ನಿವೃತ್ತ ಐಎಎಸ್ ಅಧಿಕಾರಿ, ಕಾಸರಗೋಡಿನ ಡಾ. ಪಿ.ಕೆ.ಜಯಶ್ರೀ, ಕೈಗಾರಿಕೋದ್ಯಮಿ ಎನ್.ಎ.ಅಬೂಬಕರ್ ಹಾಜಿ, ಮುಖ್ಯ ಕಾರ್ಯದರ್ಶಿ ಡಾ. ವಿ ವೇಣು ಮೊದಲಾದವರು ಉಪಸ್ಥಿತರಿದ್ದರು. 20ಮಂದಿ ಸಚಿವರು ಬೆಳಗ್ಗಿನ ಉಪಾಹಾರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.