ಸಿಯೋಲ್ : ಜಪಾನ್‌ನನ್ನು ಗುರಿಯಾಗಿಸಿಕೊಂಡು ಬೇಹುಗಾರಿಕಾ ಉಪಗ್ರಹ ಉಡ್ಡಯನ ಮಾಡುವ ಉತ್ತರ ಕೊರಿಯಾ ನಿರ್ಧಾರದ ವಿರುದ್ಧ ಸಿಡಿಮಿಡಿಗೊಂಡಿರುವ ದಕ್ಷಿಣ ಕೊರಿಯಾ, ಒಂದೊಮ್ಮೆ ಭದ್ರತಾ ಸಮಸ್ಯೆ ಎದುರಾದರೆ ಉಭಯ ದೇಶಗಳ ನಡುವಿನ ಒಪ್ಪಂದವನ್ನು ಮುರಿದುಕೊಳ್ಳಲಾಗುವುದು ಎಂದು ದಕ್ಷಿಣ ಕೊರಿಯಾ ಅಧ್ಯಕ್ಷರ ಕಚೇರಿಯ ಪ್ರಕಟಣೆ ತಿಳಿಸಿದೆ.
ವಿಶ್ವಸಂಸ್ಥೆಯ ನಿಲುವಿಗೆ ವಿರುದ್ಧವಾಗಿ ಬೇಹುಗಾರಿಕಾ ಉಪಗ್ರಹವನ್ನು ಉತ್ತರ ಕೊರಿಯಾ ಕಕ್ಷೆಗೆ ಸೇರಿಸಲು ಮುಂದಾಗಿದೆ ಎಂದು ಟೋಕಿಯೊ ಮತ್ತು ಸಿಯೋಲ್ ಆರೋಪಿಸಿವೆ. ಖಂಡಾಂತರ ಕ್ಷಿಪಣಿ ತಂತ್ರಜ್ಞಾನವನ್ನು ಉತ್ತರ ಕೊರಿಯಾ ಬಳಸದಂತೆ ವಿಶ್ವಸಂಸ್ತೆ ನಿರ್ಣಯ ಕೈಗೊಂಡಿದೆ.
ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವೆ ಯಾವುದೇ ಸಮಸ್ಯೆ ಉಂಟಾಗದಂತೆ 2018ರಲ್ಲಿ ನಡೆದಿದ್ದ ಒಪ್ಪಂದವನ್ನು ಅಮಾನತಿನಲ್ಲಿಡುವ ಸಾಧ್ಯತೆ ಇದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕೊರಿಯಾ ವಿರುದ್ಧ ಬ್ರಿಟನ್-ದಕ್ಷಿಣ ಕೊರಿಯಾ ನಿರ್ಬಂಧ ಹೇರಿಕೆಗೆ ನಿರ್ಧಾರ
ಲಂಡನ್: ಬ್ರಿಟನ್ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಬ್ರಿಟನ್ ಜತೆಗೂಡಿ ಉತ್ತರ ಕೊರಿಯಾ ವಿರುದ್ಧ ನಿರ್ಬಂಧ ಹೇರಲು ಜಂಟಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಬ್ರಿಟನ್ ಸರ್ಕಾರ ಹೇಳಿದೆ.
ಬ್ರಿಟನ್‌ನ ರಾಯಲ್ ನೇವಿ ಹಾಗೂ ದಕ್ಷಿಣ ಕೊರಯಾದ ನೌಕಾದಳ ಜಂಟಿ ಸಮರಾಭ್ಯಾಸ ನಡೆಸಲಿವೆ. ಜತೆಗೆ ಪೂರ್ವ ಚೀನಾ ಸಮುದ್ರದಲ್ಲಿನ ಕಳ್ಳಸಾಗಣೆ ತಡೆಯಲು ಈ ಎರಡೂ ನೌಕಾ ದಳಗಳು ಜಂಟಿ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲೂ ಒಪ್ಪಂದ ನಡೆಯಲಿದೆ ಎಂದು ಹೇಳಿದೆ.