ಶ್ರೀನಗರ: ಕುಲ್ಗಾಂ ಜಿಲ್ಲೆಯ ನೇಹಾಮಾ ಗ್ರಾಮದಲ್ಲಿ ಗುರುವಾರ ರಾತ್ರಿಯಿಡಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆಯ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತರಾದ ಉಗ್ರರನ್ನು, ಸಂಘಟನೆಯ ಪಿಎಎಫ್‌ಎಫ್‌ನ ಸಮೀರ್ ಅಹ್ಮದ್ ಶೇಖ್, ಟಿಆರ್‌ಎಫ್‌ನ ಯಾಸಿರ್ ಬಿಲಾಲ್ ಭಟ್, ಡ್ಯಾನಿಷ್ ಅಹ್ಮದ್ ಥೋಕರ್, ಹನ್ಜುಲ್ಲಾ ಯಾಕೂಬ್ ಶಾ ಹಾಗೂ ಉಬೇದ್ ಅಹ್ಮದ್ ಪದ್ಡರ್ ಎಂದು ಗುರುತಿಸಲಾಗಿದೆ.
ಪಿಎಎಫ್‌ಎಫ್ ಹಾಗೂ ಟಿಆರ್‌ಎಫ್, ಲಷ್ಕರ್-ಎ-ತಯಬಾದ ಅಂಗಸಂಸ್ಥೆಗಳಾಗಿವೆ ಎಂದು ಭದ್ರತಾ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.
'18 ಗಂಟೆಗಳ ಕಾಲ ಎನ್‌ಕೌಂಟರ್ ನಡೆದಿದೆ. ಹತ್ಯೆ ಮಾಡಲಾದ ಉಗ್ರರ ಶವಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಡ್ರೋನ್ ನೆರವಿನಿಂದ ಉಗ್ರರ ಶವಗಳನ್ನು ಪತ್ತೆ ಹಚ್ಚಲಾಯಿತು' ಎಂದು ಐಜಿಪಿ (ಕಾಶ್ಮೀರ ವಲಯ) ವಿ.ಕೆ.ಬಿರ್ದಿ ಹೇಳಿದ್ದಾರೆ.
'ನೇಹಾಮಾ ಗ್ರಾಮದಲ್ಲಿ ಉಗ್ರರು ಅಡಗಿದ್ದ ಬಗ್ಗೆ ಮಾಹಿತಿ ದೊರೆತ ಬೆನ್ನಲ್ಲೇ, ಶೋಧ ಕಾರ್ಯಾಚರಣೆ ಆರಂಭಿಸಿ, ಉಗ್ರರು ಅವಿತಿದ್ದ ಸ್ಥಳವನ್ನು ಸುತ್ತುವರಿಯಲಾಯಿತು. ಉಗ್ರರು ಯೋಧರತ್ತ ಗುಂಡು ಹಾರಿಸಿದಾಗ, ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದವು. ನಂತರ, ಇಡೀ ಕಾರ್ಯಾಚರಣೆಯೇ ಎನ್‌ಕೌಂಟರ್ ಸ್ವರೂಪ ಪಡೆಯಿತು' ಎಂದು ಅವರು ಹೇಳಿದ್ದಾರೆ.
'ದೀರ್ಘಕಾಲ ಗುಂಡಿನ ಚಕಮಕಿ ನಡೆದ ಪರಿಣಾಮ, ಉಗ್ರರು ಅಡಗಿದ್ದ ಮನೆಗೆ ಬೆಂಕಿ ಹೊತ್ತಿಕೊಂಡಿತು. ಹೀಗಾಗಿ, ಉಗ್ರರು ಮನೆಯಿಂದ ಹೊರಬರುವಂತಾಯಿತು' ಎಂದು ಅವರು ವಿವರಿಸಿದ್ದಾರೆ.