ಬೆಂಗಳೂರು: ನಾಸಾ-ಇಸ್ರೊ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸಿಂಥೆಟಿಕ್ ಅಪರ್ಚರ್ ರೆಡಾರ್ (ನಿಸಾರ್) ಉಪಗ್ರಹವನ್ನು 2024 ರಲ್ಲಿ ಉಡಾವಣೆ ಮಾಡಲಾಗುವುದು ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ನಾಸಾದ ನಿಸಾರ್ ಯೋಜನೆಯ ವ್ಯವಸ್ಥಾಪಕ ಫಿಲ್ ಬರೆಲಾ ಅವರು, ಮುಂದಿನ ವರ್ಷದ ಮೊದಲ ಮೂರು ತಿಂಗಳೊಳಗೆ ಉಪಗ್ರಹದ ಉಡಾವಣೆ ಸಾಧ್ಯ.
ಜಿಎಸ್‌ಎಲ್‌ವಿ ಮಾರ್ಕ್-2 ರಾಕೆಟ್ ಮೂಲಕ ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿದೆ. ಈ ಉಪಗ್ರಹವು ಮೂರು ವರ್ಷ ಕಾರ್ಯ ನಿರ್ವಹಿಸಲಿದ್ದು, ಭೂಭಾಗ, ಹಿಮ ಆವೃತ ಪ್ರದೇಶಗಳ ಮೇಲ್ಮೈಯ ಬದಲಾವಣೆಗಳನ್ನು ಪ್ರತಿ 12 ದಿನಗಳಿಗೊಮ್ಮೆ ಸಮೀಕ್ಷೆ ಮಾಡಲಿದೆ. ಉಪಗ್ರಹ ಕಾರ್ಯಾರಂಭ ಮಾಡಿದ 90 ದಿನಗಳ ಬಳಿಕ ಸಮೀಕ್ಷೆಯನ್ನು ಆರಂಭಿಸುತ್ತದೆ.
'ಬಾಕಿ ಉಳಿದಿರುವ ಪ್ರಮುಖ ಪರೀಕ್ಷೆಗಳ ಪೈಕಿ ಕಂಪನ ಪರೀಕ್ಷೆ ಈಗ ನಡೆದಿದೆ. ಕಾರ್ಯಕ್ಷಮತೆಯ ಪರೀಕ್ಷೆಗಳ ಸರಣಿ ನಡೆಸಬೇಕಾಗಿದೆ. ಬ್ಯಾಟರಿ ಮತ್ತು ಸಿಮ್ಯುಲೇಷನ್ ಪರೀಕ್ಷೆ ನಡೆಸಲಾಗಿದ್ದು, ಈ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುವ ಕ್ಷಮತೆ ಸಾಧಿಸಿದೆ' ಎಂದು ಬರೇಲಾ ತಿಳಿಸಿದ್ದಾರೆ.
ನಾಸಾದ ಜೆಟ್ ಪ್ರೊಪೆಲ್ಷನ್ ಲ್ಯಾಬೊರೇಟರಿಯ ನಿರ್ದೇಶಕಿ ಡಾ.ಲೂರಿ ಲೆಶಿನ್ ಮಾತನಾಡಿ, ನಿಸಾರ್ ಯೋಜನೆಯು ಈ ಸರಣಿಯಲ್ಲಿ ಈ ಹಿಂದೆ ಹಾರಿ ಬಿಟ್ಟ ಉಪಗ್ರಹಗಳಿಗಿಂತಲೂ ಉತ್ತಮವಾದುದು. ಈ ಸಾಧನವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಭೂಮಿಯಲ್ಲಿ ಆಗುವ ಬದಲಾವಣೆಗಳನ್ನು ಬಹು ವರ್ಷಗಳ ಕಾಲಮಾಪಕದಲ್ಲಿ ಗಮನಿಸಬಹುದು ಎಂದು ಹೇಳಿದರು.
ನಿಸಾರ್ ಉಪಗ್ರಹ ಭೂಮಿಯ ಕೆಳಹಂತದ ಕಕ್ಷೆಯಲ್ಲಿ ನೆಲೆ ನಿಂತು ಭೂಮಿಯನ್ನು ಗಮನಿಸುತ್ತದೆ. ಇಡೀ ಭೂಮಿಯ ನಕ್ಷೆಯನ್ನು 12 ದಿನಗಳಲ್ಲಿ ರೂಪಿಸಿ, ಭೂ ವ್ಯವಸ್ಥೆ, ಹಿಮ ಪ್ರದೇಶ, ಸಸ್ಯ ಸಂಪತ್ತು, ಸಮುದ್ರದ ನೀರಿನ ಮಟ್ಟ ಏರಿಕೆ, ಅಂತರ್ಜಲ, ಎಲ್ಲ ಬಗೆಯ ನೈಸರ್ಗಿಕ ದುರಂತಗಳ ನಿಯಮಿತ ದತ್ತಾಂಶವನ್ನು ಪ್ರಾದೇಶಿಕವಾಗಿ ಮತ್ತು ತಾತ್ಕಾಲಿಕವಾಗಿ ಒದಗಿಸುವ ಕಾರ್ಯ ನಿರ್ವಹಿಸುತ್ತದೆ.