ಕಾಸರಗೋಡು: ಮೀನು ಹಿಡಿಯುವ ಸಂದರ್ಭ ಬಲೆ ಕಾಲಿಗೆ ಸಿಲುಕಿದ ಪರಿಣಾಮ ಮೀನುಕಾರ್ಮಿಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಾಸರಗೋಡು ಕಾವುಗೋಳಿ ಕಡಪ್ಪುರ ಶಿವಕೃಪಾ ನಿವಾಸಿ ಉಪೇಂದ್ರನ್ ಎಸ್.ಕೆ(57)ಮೃತಪಟ್ಟವರು.
ಸೋಮವಾರ ಬೆಳಗ್ಗೆ 6.30ಕ್ಕೆ ಕಾವುಗೋಳಿ ಸಮುದ್ರದಲ್ಲಿ ಬಲೆಬೀಸಿ ಮೀನು ಹಿಡಿಯುತ್ತಿರುವ ಮಧ್ಯೆ ದುರಂತ ಸಂಭವಿಸಿದೆ. ಕಾಲಿಗೆ ಬಲೆ ಸಿಲುಕಿಕೊಳ್ಳುತ್ತಿದ್ದಂತೆ ಬಲವಾದ ಅಲೆ ಅಪ್ಪಳಿಸಿ ಇವರು ನೀರಿಗೆ ಬಿದ್ದು, ಮುಳುಗಿದ್ದಾರೆ. ಇತರ ಮೀನುಕಾರ್ಮಿಕರು ತಕ್ಷಣ ಇವರನ್ನು ನೀರಿನಿಂದ ಮೇಲಕ್ಕೆತ್ತಿದ್ದರೂ, ಜೀವ ಉಳಿಸಲಾಗಿಲ್ಲ.