ಬೆಂಗಳೂರು: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ವಿಷಯದಲ್ಲಿ ಬಹು ಆಯಾಮದ ಚರ್ಚೆಗಳು ಬೆಳೆದಿರುವ ಈ ಹೊತ್ತಿನಲ್ಲಿ ಸಮಗ್ರ ಮಟ್ಟದಲ್ಲಿ ಗಂಭೀರ ವಿಷಯಗಳನ್ನು ಚರ್ಚಿಸದಿರುವುದು ಅಚ್ಚರಿ ಮೂಡಿಸಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಆ ಬಳಿಕ ಭಾರತದಲ್ಲಿ ಸುಧಾರಣೆಗಳ ಹೆಸರಲ್ಲಿ ಮಾಡಿರುವ ಕಾನೂನುಗಳಲ್ಲಿ ನೈಜವಾದ ಸಮಸ್ಯೆ ಎದುರಿಸುತ್ತಿರುವವರು ಹಿಂದೂ ಸಮುದಾಯ ಎಂಬುದು ಬಹಳಷ್ಟು ಚರ್ಚೆಗೊಳಗಾಗಬೇಕಾದುದು ಎಂದು ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ, ಸಂಶೋಧಕ ಪ್ರೊ.ಎ.ಷಣ್ಮುಖ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಭಾಗವಾಗಿ ಶನಿವಾರ ಬೆಳಿಗ್ಗೆ ಆಯೋಜಿಸಿದ್ದ ‘ಏಕರೂಪ ನಾಗರಿಕ ಸಂಹಿತೆ: ಸಾಧ್ಯತೆ-ಸವಾಲುಗಳು’ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿ ಅವರು ಮಾತನಾಡಿದರು.
ಭಾರತದಂತಹ ಬೃಹತ್ ಪ್ರಜಾ ವ್ಯವಸ್ಥೆಯಲ್ಲಿ ವೈಯುಕ್ತಿಕ ಕಾನೂನು ಸ್ವರೂಪ ಮತ್ತು ಅದರ ಅಡಿಯಲ್ಲಿ ಬಹುತ್ವಕ್ಕೆ ಬರಬಹುದಾದ ಸವಾಲುಗಳ ಬಗ್ಗೆ ವಿಶಾಲ ಚಿಂತನೆಗಳು ಇಂದು ಅಗತ್ಯವಿದೆ. ಆಧುನಿಕ ಕಾನೂನುಗಳು ಯುರೋಪಿನ ‘ರಿಲೀಜಿಯನ್’ ವ್ಯವಸ್ಥೆಯೊಳಗೆ ರೂಪುಗೊಂಡು ಆಧುನಿಕತೆಯ ಸೋಗಲ್ಲಿ ‘ಸೆಕ್ಯುಲರ್’ ಹೆಸರಲ್ಲಿ ಜಗತ್ತಿನಾದ್ಯಂತ ಹರಡಿಕೊಂಡಿದೆ. ಭಾರತೀಯರೆಲ್ಲರಿಗೂ ಒಂದೇ ನಾಗರೀಕ ಸಂಹಿತೆ ಇರಬೇಕು. ಆದರೆ, ಕೆಲವು ಸಮುದಾಯಗಳಿಗೆ ಮಾತ್ರ ವಿಶೆಷ ಸೌಲಭ್ಯ ಇರಬಹುದು ಎಂಬ ವ್ಯವಸ್ಥೆ ಜಾರಿಗೆ ಒತ್ತಾಯಿಸಲಾಗಿದೆ. ಸ್ವಯಂ ಆಡಳಿತ ಮತ್ತು ಕಾನೂನುಗಳ ನಡುವೆ ಸಂಘರ್ಷ ಈ ಕಾರಣದಿಂದಲೇ ಮೂಡಿಬಂದುದಾಗಿದೆ. ಭಾರತೀಯ ಸಮಾಜದಲ್ಲಿರುವ ವೈವಿಧ್ಯತೆಯನ್ನು ಸಮಾನ ನಾಗರಿಕ ಸಂಹಿತೆಯ ಅಡಿಯಲ್ಲಿ ಕಾಪಿಡುವ ಬಗೆ ಹೇಗೆಂಬ ಸವಾಲು ನಮ್ಮ ಮುಂದಿದೆ ಎಂದವರು ತಿಳಿಸಿದರು.
‘ಸೆಕ್ಯುಲರ್’ ಪ್ರಭುತ್ವದ ಚೌಕಟ್ಟಿನಲ್ಲಿ ಇಸ್ಲಾಂ ಮತಾವಲಂಬಿಗಳು ಜೀವನಪದ್ದತಿ ರೂಪಿಸಿದ್ದಾರೆ. ಅವರಿಗೆ ಮತದಲ್ಲಿ ಹೇಳಿರುವಂತೆ ಬದುಕಲು ಬೆಂಬಲ ನೀಡಲಾಗಿದೆ. ಆದರೆ ಮಿಕ್ಕುಳಿದವರು ಕಾನೂನು ರೀತ್ಯ ಬದುಕುವ, ಕಾನೂನಿಗೆ ಒಳಪಡಬೇಕಾದ ವ್ಯವಸ್ಥೆ ರೂಪುಗೊಂಡಿದೆ. ಉದಾರವಾದಿ ಮೌಲ್ಯಗಳನ್ನು ಸಾರ್ವತ್ರೀಕರಣಗೊಳಿಸಿ ಮಿಕ್ಕುಳಿದ ಸಮುದಾಯವನ್ನು ಅಧಃಪತನಕ್ಕೆ ತಳ್ಳಿದ ಪರಿಣಾಮ ವ್ಯವಸ್ಥೆಗಳು ಸಮತೋಲನ ಕಳಕೊಳ್ಳುವಂತಾಯಿತು ಎಂದವರು ವಿಶ್ಲೇಷಿಸಿದರು. ಷರಿಯಾ ಕಾಯ್ದೆ ವಾಸ್ತವದಲ್ಲಿ ಮುಸ್ಲಿಂ ಸಮುದಾಯದ ವೈಯುಕ್ತಿಕ ಸ್ವಾತಂತ್ರ್ಯವನ್ನು ಹರಣಗೊಳಿಸಿದೆ. ಅವರನ್ನು ಕಡ್ಡಾಯವಾಗಿ ಷರಿಯಾ ಪಾಲಿಸುವಂತೆ ಒತ್ತಡ ಹೇರಲಾಗಿದೆ. ಆದರೆ ಹಿಂದೂ ಸಮೂಹದಲ್ಲಿ ವೈಯುಕ್ತಿಕ-ಕೌಟುಂಬಿಕ ಕಾನೂನುಗಳು ಪ್ರಾಚೀನ ವ್ಯವಸ್ಥೆಯಲ್ಲಿ ಇದ್ದರಲಿಲ್ಲ. ಇಲ್ಲಿ ರೂಢಿಗತ ಸಂಪ್ರದಾಯಗಳಷ್ಟೇ ಇದ್ದವು. ಇದೀಗ ಪಾಶ್ಚಿಮಾತ್ಯ ವ್ಯವಸ್ಥೆಯನ್ನು ಹಿಂದೂಗಳಿಗೆ ಹೇರುವ ಮತ್ತು ಮಿಕ್ಕುಳಿದವರು ಅವರವರ ಮತಗ್ರಂಥಗಳ ಅಡಿ ವ್ಯವಸ್ಥೆ ರೂಪುಗೊಳಿಸುವ ವಿರೂಪ ಕುತ್ಸಿತತೆ ಭಾರೀ ಅಸಮತೋಲನ ಸೃಷ್ಟಿಸಲಿದೆ ಎಂದವರು ತಿಳಿಸಿದರು. ಈ ನಿಟ್ಟಿನಲ್ಲಿ ಎಲ್ಲರಿಗೂ ಒಪ್ಪುವ- ಅನುಸರಣೆ ಯೋಗ್ಯ ಅಪ್ಪುವ ವ್ಯವಸ್ಥೆ ಜಾರಿಯಾದರೆ ಸಂಘರ್ಷ ರಹಿತ ಸಮಾಜ ಬೆಳವಣಿಗೆಯಾಗುವುದೆಂದು ಅವರು ಆಶಯ ವ್ಯಕ್ತಪಡಿಸಿದರು.
ವಿವಿಧ ವಲಯಗಳ ಗಣ್ಯರು, ವಿದ್ಯಾರ್ಥಿಗಳು, ಓದುಗರು ಭಾಗವಹಿಸಿದ್ದ ಸಮಾರಂಭದಲ್ಲಿ ಲೇಖಕ, ವಾಯ್ಸ್ ಆಫ್ ಇಂಡಿಯಾದ ಕನ್ನಡ ವಿಭಾಗದ ಸಂಪಾದಕ ಮಂಜುನಾಥ ಅಜ್ಜಂಪುರ ಅವರು ಪ್ರೊ.ಎ.ಷಣ್ಮುಖ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯ ವಿಭಾಗದ ಸಂಚಾಲಕ ವಿಘ್ನೇಶ್ವರ ಭಟ್, ಪ್ರಬಂಧಕ ಮೋಹನ್ ನೇತೃತ್ವ ವಹಿಸಿದ್ದರು. ಶ್ರೀಮತಿ.ರಶ್ಮಿ ವಿನಯ್. ಸ್ವಾಗತಿಸಿ, ವಂದಿಸಿದರು.