ನವದೆಹಲಿ: ಇತರ ರಾಜ್ಯಗಳಲ್ಲಿ ನೋಂದಣಿಯಾಗಿರುವ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ವಾಹನಗಳಿಂದ ಕೇರಳ ಸರ್ಕಾರ ಪ್ರವೇಶ ತೆರಿಗೆ ಸಂಗ್ರಹಿಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಪ್ರವೇಶ ತೆರಿಗೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಾಹನ ಮಾಲೀಕರಿಂದ ತೆರಿಗೆ ವಸೂಲಿ ಮಾಡುವುದಿಲ್ಲ ಎಂದು ಸರ್ಕಾರ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದೆ.
ತಮಿಳುನಾಡು ಕೂಡ ಪ್ರವೇಶ ತೆರಿಗೆ ವಿಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ರಾಬಿನ್ ಬಸ್ ಮಾಲೀಕ ಹಾಗೂ ಇತರರಿಂದ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಪ್ರವೇಶ ತೆರಿಗೆ ಸಂಗ್ರಹಿಸುವುದಿಲ್ಲ ಎಂಬುದು ದೃಢಪಟ್ಟಿದೆ.
ಈ ಹಿಂದೆ, ರಾಜ್ಯ ಸರ್ಕಾರಗಳು ವಿಶೇಷ ಪ್ರವೇಶ ತೆರಿಗೆ ವಸೂಲಿ ಮಾಡುವುದನ್ನು ವಿರೋಧಿಸಿ ವಿವಿಧ ಖಾಸಗಿ ಬಸ್ ಮಾಲೀಕರು ಸಲ್ಲಿಸಿದ್ದ ಅರ್ಜಿಗಳ ಮೇಲೆ ತೆರಿಗೆ ಸಂಗ್ರಹವನ್ನು ನಿಲ್ಲಿಸಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಆದರೆ, ಆದೇಶ ಜಾರಿಯಲ್ಲಿರುವವರೆಗೂ ಕೇರಳ ಮತ್ತು ತಮಿಳುನಾಡು ಪ್ರವೇಶ ತೆರಿಗೆ ವಿಧಿಸುವುದನ್ನು ಮುಂದುವರಿಸಿದೆ ಎಂದು ಬಸ್ ಮಾಲೀಕರು ಸುಪ್ರೀಂ ಕೋರ್ಟ್‍ಗೆ ತಿಳಿಸಿದ್ದಾರೆ. ಮಧ್ಯರಾತ್ರಿ ಹಾಗೂ ಬೆಳಗಿನ ಜಾವದಲ್ಲೂ ವಾಹನಗಳನ್ನು ನಿಲ್ಲಿಸಿ ಸುಂಕ ವಸೂಲಿ ಮಾಡುತ್ತಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ತೆರಿಗೆ ವಸೂಲಿಗಾರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು ಎಂದು ಖಾಸಗಿ ವಾಹನ ಮಾಲೀಕರು ಆಗ್ರಹಿಸಿದ್ದÀರು. ಸುಪ್ರೀಂ ಕೋರ್ಟ್ ನ ಮಧ್ಯಂತರ ಆದೇಶವನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದ್ದು, ಇನ್ನು ಮುಂದೆ ತೆರಿಗೆ ಸಂಗ್ರಹಿಸುವುದಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ನ್ಯಾಯಾಂಗ ನಿಂದನೆ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೋಟಿಸ್ ಜಾರಿ ಮಾಡಿದೆ, ಆದರೆ ಅಧಿಕಾರಿಗಳು ಖುದ್ದು ಹಾಜರಾಗದಂತೆ ತಡೆಯಲಾಗಿದೆ. ತಮಿಳುನಾಡು ತೆರಿಗೆ ವಸೂಲಿ ಮಾಡುವುದಿಲ್ಲ ಎಂದು ಹೇಳಿರುವುದರಿಂದ ಕೇರಳ ತೆರಿಗೆ ವಸೂಲಿ ಮಾಡುವುದನ್ನು ನಿಷೇಧಿಸಬೇಕು ಎಂದು ಬಸ್ ಮಾಲೀಕರು ಆಗ್ರಹಿಸಿದ್ದರು. ನಂತರ ಕೇರಳವೂ ಸುಪ್ರೀಂ ಕೋರ್ಟ್‍ನ ಮಧ್ಯಂತರ ಆದೇಶವನ್ನು ಜಾರಿಗೊಳಿಸುವುದಾಗಿ ಘೋಷಿಸಿತು.
ರಾಜ್ಯಗಳು ತೆರಿಗೆ ಆದಾಯವನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಮೌಖಿಕವಾಗಿ ಗಮನಿಸಿತು ಮತ್ತು ವಿಷಯದ ಕುರಿತು ವಿವಿಧ ಕಾನೂನುಗಳ ಸಿಂಧುತ್ವವನ್ನು ಪರಿಶೀಲಿಸಬೇಕು ಎಂದಿದೆ. ವಿಶೇಷ ಪ್ರವೇಶ ತೆರಿಗೆ ವಸೂಲಿ ವಿರೋಧಿಸಿ ಖಾಸಗಿ ಬಸ್ ಮಾಲೀಕರು ಸಲ್ಲಿಸಿರುವ ಅರ್ಜಿಯ ವಿವರವಾದ ವಿಚಾರಣೆಯನ್ನು ಜನವರಿ 10ರಂದು ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.