ನವದೆಹಲಿ :ಸುಪ್ರೀಂ ಕೋರ್ಟಿನ ಹಿಂದಿನ ನ್ಯಾಯಮೂರ್ತಿಗಳಾಗಿದ್ದ ದೀಪಕ್ ಮಿಶ್ರಾ ಅವರ ಅವಧಿಯಲ್ಲಿ ಅವರ ನೇತೃತ್ವದ ಕೊಲೀಜಿಯಂ 2018ರಲ್ಲಿ ತಮ್ಮನ್ನು ಛತ್ತೀಸಗಢ ಹೈಕೋರ್ಟಿನಿಂದ ಅಲಹಾಬಾದ್ ಹೈಕೋರ್ಟಿಗೆ ವರ್ಗಾಯಿಸಿದ ಕ್ರಮವು "ದುರುದ್ದೇಶವನ್ನು" ಹೊಂದಿತ್ತು ಹಾಗೂ ತಮಗೆ ಕಿರುಕುಳ ನೀಡುವ ಉದ್ದೇಶವನ್ನು ಹೊಂದಿತ್ತು ಎಂದು ಇತ್ತೀಚೆಗೆ ನಿವೃತ್ತರಾಗಲಿರುವ ಅಲಹಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಹೇಳಿದ್ದಾರೆ.
"ಆದರೆ ನನ್ನ ಅದೃಷ್ಟವೆಂಬಂತೆ ಈ ಶಾಪ ನನಗೆ ವರದಾನವಾಯಿತು, ಏಕೆಂದರೆ ನನಗೆ ಇಲ್ಲಿನ ಸಹೋದ್ಯೋಗಿ ನ್ಯಾಯಾಧೀಶರಿಂದ ಹಾಗೂ ವಕೀಲರ ಸಂಘದ ಸದಸ್ಯರಿಂದ ಅಪಾರ ಬೆಂಬಲ, ಪ್ರೀತಿ ಮತ್ತು ಸಹಕಾರ ದೊರಕಿತು," ಎಂದು ಹೈಕೋರ್ಟ್ ತಮಗೆ ಆಯೋಜಿಸಿದ್ದ ವಿದಾಯ ಸಮಾರಂಭದಲ್ಲಿ ಅವರು ಹೇಳಿದರು.
ತಮ್ಮ ದಿಢೀರ್ ವರ್ಗಾವಣೆ ಹಾಗೂ ತಮ್ಮ ಮೇಲೆ ತೋರಿಸಲಾದ ಅಪಾರ ಆದರ ಮತ್ತು ಪ್ರೀತಿಗೆ ಕಾರಣಗಳು ತಮಗೆ ಇನ್ನೂ ತಿಳಿದಿಲ್ಲ ಎಂದು ಅವರು ಹೇಳಿದರು.
ಅದೇ ಸಮಯ ತಮಗೆ ಉಂಟು ಮಾಡಿದ ಅನ್ಯಾಯವನ್ನು ಸರಿಪಡಿಸಿದ್ದಕ್ಕಾಗಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಧನ್ಯವಾದ ಹೇಳೀದರು. ಸಿಜೆಐ ಚಂದ್ರಚೂಡ್ ನೇತೃತ್ವದ ಕೊಲೀಜಿಯಂ ಪ್ರಿತಿಂಕರ್ ಅವರನ್ನು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪದೋನ್ನತಿಗೆ ಶಿಫಾರಸು ಮಾಡಿತ್ತು.
"ಜೀವನ ಒಂದು ಪರೀಕ್ಷೆಯಾಗಿದೆ, ಫಲಿತಾಂಶವಲ್ಲ. ಉತ್ತಮ ಕಾರ್ಯಗಳು ನಿರ್ಣಾಯಕವಾಗಿವೆ," ಎಂದು ಅವರು ಹೇಳಿದರು.
ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಅವರು ಮಧ್ಯ ಪ್ರದೇಶ ಬಾರ್ ಕೌನ್ಸಿಲ್‌ನಲ್ಲಿ 1984ರಲ್ಲಿ ನೋಂದಾಯಿತರಾಗಿದ್ದರು ಹಾಗೂ ಮಾರ್ಚ್ 31, 2009ರಲ್ಲಿ ಅವರನ್ನು ಛತ್ತೀಸಗಢ ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಳಿಸಲಾಗಿತ್ತು. ಅಲ್ಲಿ ಅವರು ಎಂಟೂವರೆ ವರ್ಷ ಸೇವೆ ಸಲ್ಲಿಸಿದ ನಂತರ ಅವರನ್ನು ಅಕ್ಟೋಬರ್ 3, 2018ರಂದು ಅಲಹಾಬಾದ್ ಹೈಕೋರ್ಟಿಗೆ ವರ್ಗಾಯಿಸಲಾಗಿತ್ತು. ನಂತರ ಅವರನ್ನು ಫೆಬ್ರವರಿ 13, 2023ರಂದು ಅಲಹಾಬಾದ್ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳಿಸಲಾಗಿತ್ತು.