ವಾರಾಣಸಿ: ಐಐಟಿ-ಬಿಎಚ್‌ಯು (ಬನಾರಸ್ ಹಿಂದೂ ವಿಶ್ವವಿದ್ಯಾಲಯ) ವಿದ್ಯಾರ್ಥಿನಿಯನ್ನು ಇಲ್ಲಿನ ಹಾಸ್ಟೆಲ್ ಬಳಿ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ವಿವಸ್ತ್ರಗೊಳಿಸಿ ಕಿರುಕುಳ ನೀಡಿ, ಕೃತ್ಯವನ್ನು ವಿಡಿಯೊ ಸಹ ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಿಎಚ್‌ಯುನ ನೂರಾರು ವಿದ್ಯಾರ್ಥಿಗಳು ಘಟನೆ ಖಂಡಿಸಿ ಗುರುವಾರ ಪ್ರತಿಭಟನೆ ನಡೆಸಿದರು. ಘಟನೆಯಲ್ಲಿ ಹೊರಗಿನ ದುಷ್ಕರ್ಮಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ವಿ.ವಿ ಕ್ಯಾಂಪಸ್‌ಗೆ ಹೊರಗಿನವರ ಪ್ರವೇಶ ನಿಷೇಧಿಸಬೇಕು. ಕ್ಯಾಂಪಸ್ ಆವರಣದಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಬೇಕು. ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ವರದಿಗಳ ಪ್ರಕಾರ, ವಿದ್ಯಾರ್ಥಿನಿಯು ತನ್ನ ಹಾಸ್ಟೆಲ್‌ನಿಂದ, ಸ್ನೇಹಿತನೊಂದಿಗೆ ಬುಧವಾರ ರಾತ್ರಿ ಹೊರಗಡೆ ಬಂದಿದ್ದಾಗ ಈ ಘಟನೆ ನಡೆದಿದೆ.
ಸಂತ್ರಸ್ತೆಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ, 'ಬೈಕಿನಲ್ಲಿ ಬಂದ ಮೂವರು ಯುವಕರು ನಮ್ಮನ್ನು ಅಡ್ಡಗಟ್ಟಿ, ಕಿರುಚದಂತೆ ಬಾಯಿ ಅದುಮಿ ಹಿಡಿದರು. ಸ್ನೇಹಿತನಿಂದ ನನ್ನನ್ನು ಬೇರೆ ಮಾಡಿ, ದೂರಕ್ಕೆ ಎಳೆದುಕೊಂಡು ಹೋದರು. ದೇವಸ್ಥಾನದ ಸಮೀಪದ ನಿರ್ಜನ ಸ್ಥಳದಲ್ಲಿ ವಿವಸ್ತ್ರಗೊಳಿಸಿ, ಕಿರುಕುಳ ನೀಡಿದರು. ಫೋಟೊ ತೆಗೆದು, ವಿಡಿಯೊ ಮಾಡಿಕೊಂಡರು' ಎಂದು ತಿಳಿಸಿದ್ದಾರೆ.
'ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಲಂಕಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆದಿದೆ' ಎಂದು ವಾರಾಣಸಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ನಂತರ ಬಿಎಚ್‌ಯು ಆಡಳಿತವು ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕ್ಯಾಂಪಸ್‌ಗೆ ಹೊರಗಿನವರ ಪ್ರವೇಶ ನಿಷೇಧಿಸಿದೆ ಎಂದು ವರದಿಗಳು ತಿಳಿಸಿವೆ.
ಪ್ರಿಯಾಂಕಾ ಗಾಂಧಿ ವಾದ್ರಾ ತರಾಟೆ:
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಐಐಟಿಯಂತಹ ಉನ್ನತ ಸಂಸ್ಥೆಗಳು ಈಗ ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿಲ್ಲವೇ? ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರು ತಮ್ಮದೇ ಶಿಕ್ಷಣ ಸಂಸ್ಥೆಯೊಳಗೆ ನಿರ್ಭಯವಾಗಿ ಓಡಾಡಲು ಇನ್ನು ಮುಂದೆ ಸಾಧ್ಯವಿಲ್ಲವೇ? ಎಂದು ಸಾಮಾಜಿಕ ಜಾಲತಾಣದ 'ಎಕ್ಸ್'ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.