HEALTH TIPS

ಮಾಹಿತಿ ಸಾರ್ವಜನಿಕರಿಗೆ ಮಾತ್ರ ಗೋಪ್ಯವೇಕೆ? ಚುನಾವಣಾಬಾಂಡ್ ಬಗ್ಗೆ ಸುಪ್ರೀಂಕೋರ್ಟ್

               ವದೆಹಲಿ: ಚುನಾವಣಾ ಬಾಂಡ್ ಯೋಜನೆಯ ಮೂಲಕ ನೀಡುವ ಹಣದ ಮೂಲವು ಕೆಲವು ಆಯಾಮಗಳಲ್ಲಿ ಮಾತ್ರ ಗೋಪ್ಯ ಎಂಬ ವಿಚಾರವಾಗಿ ಸುಪ್ರೀಂ ಕೋರ್ಟ್‌ ಕೆಲವು ಪ್ರಶ್ನೆಗಳನ್ನು ಎತ್ತಿದೆ. ಹಣದ ಮೂಲವನ್ನು ತಿಳಿದುಕೊಳ್ಳಲು ಸಾರ್ವಜನಿಕರಿಗೆ ಅವಕಾಶವಿಲ್ಲದಿರುವುದು, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಹಾಗೂ ತನಿಖಾ ಸಂಸ್ಥೆಗಳಿಗೆ ಅವಕಾಶ ಇರುವುದು ಸಮಸ್ಯೆಗೆ ಕಾರಣ ಎಂದು ಹೇಳಿದೆ.

             ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಪರಿಶೀಲಿಸುತ್ತಿದೆ. ಈ ಯೋಜನೆಯು ಸಂಬಂಧಪಟ್ಟ ವ್ಯಕ್ತಿಗೆ ಹಣ ಕೊಡುವುದರ ಬದಲು, ರಾಜಕೀಯ ಪಕ್ಷಕ್ಕೆ ಹಣ ಕೊಟ್ಟು, ಲಂಚ ನೀಡುವುದನ್ನು ಕಾನೂನುಬದ್ಧಗೊಳಿಸುವಂತೆ ಇದೆ ಎಂದು ಪೀಠ ಹೇಳಿದೆ.

                 ಎಲ್ಲ ರಾಜಕೀಯ ಪಕ್ಷಗಳಿಗೂ ಸಮಾನ ಅವಕಾಶಗಳು ಸಿಗುವ ವ್ಯವಸ್ಥೆಯನ್ನು ರೂಪಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂದಾದಲ್ಲಿ, ದೇಣಿಗೆ ಮೊತ್ತವು ಚುನಾವಣಾ ಆಯೋಗಕ್ಕೆ ಹೋಗುವಂತೆ ಮಾಡಬೇಕು, ಆಯೋಗವು ಆ ಹಣವನ್ನು ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಪೀಠ ಹೇಳಿತು.

ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಮಾಡಿದಲ್ಲಿ, ಇನ್ನೂ ಹೆಚ್ಚು ಪಾರದರ್ಶಕವಾಗಿರುವ, ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ಹೊಸ ವ್ಯವಸ್ಥೆಯೊಂದನ್ನು ರೂಪಿಸಲು ಸರ್ಕಾರಕ್ಕೆ ನಿರ್ಬಂಧಗಳೇನೂ ಇರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

                ನ್ಯಾಯಪೀಠವು ಈ ಯೋಜನೆಯ ವಿಚಾರವಾಗಿ 'ಅನಾಮಧೇಯ', 'ರಹಸ್ಯ' ಎಂಬ ಪದಗಳನ್ನು ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರ್ಕಾರದ ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಯೋಜನೆಯು ಗೋಪ್ಯತೆಯನ್ನು ಕಾಯ್ದುಕೊಳ್ಳುತ್ತದೆ ಎಂಬ ವಿವರಣೆ ನೀಡಿದರು. ರಾಜಕೀಯ ಪಕ್ಷಗಳಿಗೆ ಸಿಗುವ ದೇಣಿಗೆಯಲ್ಲಿ ಆಡಳಿತ ಪಕ್ಷಕ್ಕೆ ಹೆಚ್ಚಿನ ಪಾಲು ಸಿಗುವುದು ಮೊದಲಿನಿಂದಲೂ ಇರುವಂಥದ್ದು ಎಂದು ವಿವರಿಸಿದರು.

               ರಾಜಕೀಯ ಪಕ್ಷಗಳಿಗೆ ನ್ಯಾಯಬದ್ಧ ಹಣವು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಸಿಗುವಂತೆ ಮಾಡುವ ಪ್ರಯತ್ನ ಈ ಯೋಜನೆಯಲ್ಲಿದೆ ಎಂದರು. ದೇಣಿಗೆ ನೀಡಿದವರಿಗೆ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ, ದೇಣಿಗೆಗಳಲ್ಲಿ ಗೋಪ್ಯತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂದರು.

             ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದಾರೆ. ಕೆಲವು ಆಯಾಮಗಳಲ್ಲಿ ಮಾತ್ರ ಈ ಯೋಜನೆಯು ಗೋಪ್ಯತೆಯನ್ನು ಕಾಯ್ದುಕೊಳ್ಳುತ್ತದೆ ಎಂಬುದೇ ಯೋಜನೆಯಲ್ಲಿನ ಸಮಸ್ಯೆ ಎಂದು ಪೀಠ ಹೇಳಿತು.

                  'ಎಸ್‌ಬಿಐ ವಿಚಾರದಲ್ಲಿ ಈ ಯೋಜನೆಯು ಗೋಪ್ಯವಲ್ಲ, ಕಾನೂನು ಜಾರಿ ಸಂಸ್ಥೆಗಳ ವಿಚಾರವಾಗಿ ಇದು ಗೋಪ್ಯವಲ್ಲ. ಭಾರಿ ಪ್ರಮಾಣದಲ್ಲಿ ದೇಣಿಗೆ ನೀಡಲು ಉದ್ದೇಶಿಸಿರುವ ವ್ಯಕ್ತಿಯು ಆ ಮೊತ್ತವನ್ನು ಬಾಂಡ್‌ ಮೂಲಕ ನೀಡುವುದೇ ಇಲ್ಲ. ಆತ ಮೊತ್ತವನ್ನು ಒಡೆದು, ಅದನ್ನು ಕೆಲವರಿಗೆ ನೀಡಿ, ಅವರು ಸಣ್ಣ ಮೊತ್ತಗಳಲ್ಲಿ ಬಾಂಡ್ ಖರೀದಿಸುವಂತೆ ಮಾಡುತ್ತಾನೆ. ಬೃಹತ್ ಪ್ರಮಾಣದಲ್ಲಿ ದೇಣಿಗೆ ನೀಡುವವನು, ಎಸ್‌ಬಿಐನ ದಾಖಲೆಗಳಲ್ಲಿ ತನ್ನ ಹೆಸರು ನಮೂದಾಗಲು ಅವಕಾಶ ನೀಡುವುದೇ ಇಲ್ಲ. ಈ ಯೋಜನೆಯಲ್ಲಿ ಕೆಲವಷ್ಟು ಅಂಶಗಳಿಗೆ ಮಾತ್ರ ಅನಾಮಕತೆ ಹಾಗೂ ಕೆಲವಷ್ಟು ಅಂಶಗಳಿಗೆ ಮಾತ್ರ ಗೋಪ್ಯತೆಯನ್ನು ಕಾಯ್ದುಕೊಳ್ಳಲು ಅವಕಾಶ ಇದೆ' ಎಂದು ಪೀಠ ಹೇಳಿತು.

                  ಚುನಾವಣಾ ಬಾಂಡ್ ಯೋಜನೆಯು ರಾಜಕೀಯ ಪಕ್ಷಗಳ ನಡುವೆ ಸಮಾನತೆಯನ್ನು ಖಾತರಿಪಡಿಸುವುದಿಲ್ಲ. ಅರ್ಜಿದಾರರು ವಾದಿಸಿರುವಂತೆ ಈ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ನ್ಯಾಯಪೀಠ ಹೇಳಿತು.

                   ಕಂಪನಿಗಳ ಕಾಯ್ದೆಗೆ ತಂದಿರುವ ತಿದ್ದುಪಡಿಯ ಪ್ರಕಾರ ಯಾವ ರಾಜಕೀಯ ಪಕ್ಷಕ್ಕೆ ತಮ್ಮಿಂದ ದೇಣಿಗೆ ನೀಡಲಾಗಿದೆ ಎಂಬುದನ್ನು ಕಂಪನಿಗಳು ಹೇಳಬೇಕಾಗಿಲ್ಲ. ಆದರೆ ಒಟ್ಟು ಎಷ್ಟು ಮೊತ್ತವನ್ನು ದೇಣಿಗೆಯಾಗಿ ಕೊಡಲಾಗಿದೆ ಎಂಬುದನ್ನು ಕಂಪನಿಗಳು ಹೇಳಬೇಕು. ಈ ಯೋಜನೆಯು ಕಂಪನಿಗಳ ಪಾಲಿಗೆ ಪ್ರತೀಕಾರ ಕ್ರಮದ ಭೀತಿಯನ್ನು ತಗ್ಗಿಸುವುದಿಲ್ಲ ಎಂದು ಪೀಠ ಹೇಳಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries