ತಿರುವನಂತಪುರಂ: ಕೇರಳದ ಕಲಮಸ್ಸೆರಿಯ ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ತಾನಾಗಿಯೇ ಬಂದು ಪೊಲೀಸರ ಮುಂದೆ ಶರಣಾಗಿರುವ ಆರೋಪಿ ಡೊಮಿನಿಕ್ ಮಾರ್ಟಿನ್ ಓರ್ವ ಅಸಾಧಾರಣ ಬುದ್ಧಿವಂತ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಗಲ್ಫ್ ರಾಷ್ಟ್ರದಲ್ಲಿ ಭಾರೀ ಸಂಬಳದ ಉದ್ಯೋಗದಲ್ಲಿದ್ದ ಡೊಮಿನಿಕ್ ಮಾರ್ಟಿನ್, ಆ ಉದ್ಯೋಗವನ್ನು ತೊರೆದು ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವುದರ ಹಿಂದಿನ ಉದ್ದೇಶಗಳು ಏನಿರಬಹುದು ಎಂಬ ಪ್ರಶ್ನೆಗಳು ಉದ್ಭವವಾಗಿದೆ.
ಮಂಗಳವಾರ ವಿಶೇಷ ತನಿಖಾ ತಂಡ ಆರೋಪಿ ಮಾರ್ಟಿನ್‌ನನ್ನು ಆಲುವಾ ಬಳಿಯ ಅಥಣಿಯಲ್ಲಿರುವ ಆತನ ನಿವಾಸಕ್ಕೆ ಕರೆದೊಯ್ದಿದ್ದು, ನಿರ್ಣಾಯಕ ಸಾಕ್ಷ್ಯಾಧಾರಗಳ ಅನ್ವೇಷಣೆಯಲ್ಲಿ ಸ್ಫೋಟಕ ಸಾಧನಗಳನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಕಳೆದ ಭಾನುವಾರ ನಡೆದ ಸ್ಫೋಟಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಆರೋಪಿ ನೀಡಿದ್ದಾನೆ. ಮಾರ್ಟಿನ್, ಭಾನುವಾರ ಪೊಲೀಸರ ಮುಂದೆ ಶರಣಾದಾಗ, ತಾನು ಖರೀದಿ ಮಾಡಿದ ಸಾಮಗ್ರಿಗಳ ಬಿಲ್‌ಗಳನ್ನು ಪೊಲೀಸರ ವಶಕ್ಕೆ ನೀಡಿದ್ದು, ಇದು ಆತನ ವಿರುದ್ಧದ ಪ್ರಕರಣವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಫೋಟಕ ತಯಾರಿಕೆಗೆ ಸಂಬಂಧಿಸಿದ ಪೆಟ್ರೋಲ್ ಖರೀದಿಯ ಬಿಲ್‌ಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಮಾರ್ಟಿನ್ ನೀಡಿದ್ದಾರೆ. ಮಾರ್ಟಿನ್ ಓರ್ವ ಅಸಾಧಾರಣ ಬುದ್ಧಿವಂತಿಕೆ ಮತ್ತು ಶ್ರದ್ಧೆಯ ವ್ಯಕ್ತಿ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಇಂತಹ ಆಘಾತಕಾರಿ ಕೃತ್ಯ ಎಸಗಲು ಹೆಚ್ಚಿನ ಸಂಬಳವನ್ನು ಪಡೆಯುವ ಸಾಗರೋತ್ತರ ಉದ್ಯೋಗವನ್ನು ತ್ಯಜಿಸಿರುವ ಮಾರ್ಟಿನ್‌ನ ನಿರ್ಧಾರವು ಅಧಿಕಾರಿಗಳನ್ನು ಸಾಕಷ್ಟು ಗೊಂದಲಕ್ಕೀಡು ಮಾಡಿದೆ.
ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಮಾರ್ಟಿನ್ ಪ್ರಾವೀಣ್ಯತೆಯು ಸ್ಫೋಟ ಪ್ರಕರಣದ ಸುತ್ತಲಿನ ನಿಗೂಢತೆಯನ್ನು ಇನ್ನಷ್ಟು ಗಾಢಗೊಳಿಸಿದೆ. ಇದರ ನಡುವೆ ಮುಖ ಮುಚ್ಚುವ ಮಾಸ್ಕ್ ಧರಿಸಿ, ಮಂಗಳವಾರ ನ್ಯಾಯಾಲಯದ ಮುಂದೆ ಮಾರ್ಟಿನ್ ಹಾಜರಾದರು. ನ್ಯಾಯಾಲಯವು ಹಲವಾರು ಬಾರಿ ಕಾನೂನು ನೆರವು ನೀಡಿದ ಹೊರತಾಗಿಯೂ, ಮಾರ್ಟಿನ್ ತನ್ನನ್ನು ತಾನು ಪ್ರತಿನಿಧಿಸಲು ಒತ್ತಾಯಿಸಿದ್ದಾರೆ. ಇದು ಅವರ ಆಯ್ಕೆಯಾಗಿದೆ ಎಂದು ಆತನೇ ಸ್ಪಷ್ಟವಾಗಿ ಹೇಳಿದ್ದಾನೆ. ಅಲ್ಲದೆ, ತನಗೆ ಹಣಕಾಸಿನ ತೊಂದರೆ ಇರುವ ಯಾವುದೇ ಕಲ್ಪನೆಗಳನ್ನು ಆತ ನಿರಾಕರಿಸಿದ್ದಾನೆ. ಅಂದರೆ, ಆತ ಆರ್ಥಿಕವಾಗಿ ಶಕ್ತನಾಗಿದ್ದಾನೆ.
ಯೆಹೋವನ ಸಾಕ್ಷಿ ಆಯೋಜಿಸಿದ್ದ ಸಂಘಟಕರು ಮತ್ತು ಈ ಸಮುದಾಯವು ಸಾರ್ವಜನಿಕರು, ಮಕ್ಕಳಿಗೆ ಸಹ ತಪ್ಪು ಸಂದೇಶ ಹಾಗೂ ಮೌಲ್ಯಗಳನ್ನು ಕಲಿಸುತ್ತಿದೆ. ಸಮಾವೇಶ ನಿಲ್ಲಿಸಲು ಕೇಳಿಕೊಂಡಿದ್ದರೂ ಯಾರೂ ಗಮನಿಸಲಿಲ್ಲ. ಹೀಗಾಗಿ ಸರಣಿ ಸ್ಫೋಟ ಮಾಡಲು ನಿರ್ಧರಿಸಿದೆ ಎಂದು ಆತ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಭಾನುವಾರ ಎರ್ನಾಕುಲಂ ಜಿಲ್ಲೆ ಕಲಮಸ್ಸೆರಿಯಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಮತ್ತು 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದರು. ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿ 2 ಸಾವಿರ ಜನ ಹಾಜರಿದ್ದರು.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಸರಣಿ ಸ್ಫೋಟಗಳ ತನಿಖೆ ನಡೆಸುತ್ತಿದೆ.