ದಿನದಲ್ಲಿ ಎಷ್ಟು ಬಾರಿ ಮೊಬೈಲ್ ನೋಡುತ್ತೇವೆ ಎಂದು ನಮಗೇ ಗೊತ್ತಿಲ್ಲ.... ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ನಾವು ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಾಡಿಸುತ್ತೇವೆ. ನಾವು ಕೆಲವೊಂದು ದುರಂತ ಸುದ್ದಿ ಓದುತ್ತೇವೆ, ಎಲ್ಲೋ ಆದ ಅನಾಹುತದ ವೀಡಿಯೋ ನೋಡುತ್ತೇವೆ, ಕೊಲೆ, ಅತ್ಯಾಚಾರ, ಕಳ್ಳತನ ಈ ಬಗ್ಗೆ ಸುದ್ದಿಗಳನ್ನು ಓದುತ್ತೇವೆ, ಇದನ್ನು ಡೂಮ್ ಸ್ಕ್ರಾಲಿಂಗ್ ಎಂದು ಕರೆಯಲಾಗುವುದು, ಈ ಡೂಮ್ ಸ್ಕ್ರಾಲಿಂಗ್ ನೋಡುವುದರಿಂದ ನಮ್ಮ ಮೇಲೆ ಆಗುವ ಪರಿಣಾಮ ಬಗ್ಗೆ ತಿಳಿದರೆ ಇನ್ನು ಮುಂದೆ ಈ ರೀತಿಯ ವೀಡಿಯೋಗಳನ್ನು ನೋಡುವುದು, ಓದುವುದು ಕಡಿಮೆ ಮಾಡುತ್ತೀರಿ..
ಡೂಮ್ ಸ್ಕ್ರಾಲಿಂಗ್ ಹೆಚ್ಚಾಗಿ ಯಾರು ಮಾಡುತ್ತಾರೆ?
* ಪುರುಷರು
* ಯೌವನ ಪ್ರಾಯದವರು
* ರಾಜಕೀಯದ ಬಗ್ಗೆ ತುಂಬಾ ಆಸಕ್ತಿ ಹೊಂದಿರುವವರು
ಡೂಮ್‌ಸ್ಕ್ರಾಲಿಂಗ್‌ಗೆ ಹೇಗೆ ಒಳಗಾಗುತ್ತೇವೆ?
ತುಂಬಾ ಜನರು ಕೋವಿಡ್ 19 ಬಳಿಕ ಈ ಅಭ್ಯಾಸ ಹೆಚ್ಚಾಗಿ ಬೆಳೆಸಿಕೊಂಡಿದ್ದಾರೆ. ಸದಾ ಮೊಬೈಲ್ ನೋಡುವುದು, ಹೀಗೆ ನೋಡುತ್ತಾ ಕೆಲವೊಂದು ಸುದ್ದಿ ನೋಡುತ್ತಾರೆ, ಅದು ಅವರನ್ನು ಸೆಳೆಯುತ್ತದೆ, ನಂತರ ಅಂಥದ್ದೇ ಸುದ್ದಿಗಳು ಕಾಣಿಸಲಾರಂಭಿಸುತ್ತದೆ, ಅದರ ಬಗ್ಗೆ ತಿಳಿದುಕೊಳ್ಳಲು ಹೆಚ್ಚೆಚ್ಚು ಆಸಕ್ತಿ ತೋರಿಸುತ್ತೇವೆ.
ಉದಾಹರಣೆಗೆ ಒಂದು ಗಲಭೆಯ ವೀಡಿಯೋ ನೋಡಿದರೆ ಅದಕ್ಕೆ ಸಂಬಂಧಿಸಿದ ಒಂದಿಷ್ಟು ವೀಡಿಯೋಗಳು ಕಾಣಿಸುತ್ತವೆ, ಅವುಗಳನ್ನು ನೋಡುತ್ತಿದ್ದರೆ ನಮಗೆ ಕೋಪ ಬರುತ್ತದೆ, ಬೇಸರವಾಗುತ್ತದೆ, ಕೆಲವೊಂದು ಘಟನೆಗಳನ್ನು ನೋಡಿದಾಗ ನಮಗೆ ಸಂಬಂಧಿಸಿದ ವಿಷಯವಲ್ಲದಿದ್ದರೂ ಆಕ್ರೋಶ ಉಂಟಾಗುವುದು. ಇವೆಲ್ಲಾ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವುದು.
ಕ್ರಮೇಣ ಈ ಡೂಮ್ ಸ್ಕ್ರಾಲಿಂಗ್ ನಮ್ಮ ಮೇಲೆ ತುಂಬಾನೇ ಕೆಟ್ಟ ಪ್ರಭಾವ ಬೀರುತ್ತದೆ. ಒಂದು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ, ಮನಸ್ಸಿನಲ್ಲಿ ನೆಗೆಟಿವ್ ಆಲೋಚನೆಗಳು ಹೆಚ್ಚಾಗುವುದು. ನಮಗೆ ಸಂಬಂಧವೇ ಇಲ್ಲದ ವಿಷಯಗಳ ಬಗ್ಗೆ ಚಿಂತಿಸಿ ಒಂದು ರೀತಿಯ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಈ ಡೂಮ್ ಸ್ಕ್ರಾಲಿಂಗ್ ಅಭ್ಯಾಸಕ್ಕೆ ಕಡಿವಾಣ ಹಾಕುವುದು ಹೇಗೆ?
* ಸೋಷಿಯಲ್ ಮೀಡಿಯಾ ಬಳಕೆ ಕಡಿಮೆ ಮಾಡಿ. ಸೋಷಿಯಲ್ ಮೀಡಿಯಾದಲ್ಲಿ ಒಮ್ಮೆ ಕಣ್ಣಾಡಿಸೋಣ ಅಂತ ನೋಡುತ್ತೇವೆ, ಆದರೆ ನಿಮಿಷಗಳು ಉರುಳಿ ಗಂಟೆಗಳಾದರೂ ಮೊಬೈಲ್‌ನಲ್ಲಿ ಕಣ್ಣಾಡಿಸುತ್ತಲೇ ಇರುತ್ತೇವೆ, ಈ ಅಭ್ಯಾಸಕ್ಕೆ ಕಡಿವಾಣ ಹಾಕಬೇಕು.
* ಆನ್‌ಲೈನ್‌ನಲ್ಲಿಓದುವುದು ಕಡಿಮೆ ಮಾಡಿ. ನಿಮಗೆ ತುಂಬಾ ಒತ್ತಡ ಉಂಟು ಮಾಡುವ ಅಕೌಂಟ್‌ಗಳನ್ನು ಬ್ಲಾಕ್ ಮಾಡಿ.
* ಕ್ರೈಂ, ಗಲಭೆ , ನೆಗೆಟಿವ್ ವೀಡಿಯೋಗಳನ್ನು ನೋಡಲು ಹೋಗಬೇಡಿ.
* ಡೂಮ್ ಸ್ಕ್ರಾಲಿಂಗ್ ಮಾಡಿದಾಗ ನಿಮ್ಮ ಮನಸ್ಸಿನಲ್ಲಿ ಆಗುವ ಬದಲಾವಣೆ ನಿಮ್ಮ ಅನುಭವಕ್ಕೆ ಬರುತ್ತದೆ, ನಿಮಗೆ ಬೇಸರ ಕಾಡುವುದು, ಕೋಪ ಬರುವುದು. ಆದ್ದರಿಂದ ಇಂಥ ವೀಡಿಯೋಗಳನ್ನು ನೋಡಲು ಹೋಗಬೇಡಿ.
* ನಿದ್ದೆ ಮಾಡುವ 2 ಗಂಟೆಗೆ ಮುನ್ನ ಮೊಬೈಲ್ ದೂರವಿಡಿ. ಕುಟುಂಬದ ಜೊತೆಗೆ ಸಮಯ ಕಳೆಯಿರಿ.