ನವದೆಹಲಿ: ಯಾವುದೇ ಬ್ಯಾಂಕ್, ಅದರಲ್ಲೂ ಮುಖ್ಯವಾಗಿ ಎಸ್‌ಬಿಐ, ತಾನು ವ್ಯಕ್ತಿಯೊಬ್ಬರ ವಿರುದ್ಧ ಮೊಕದ್ದಮೆ ದಾಖಲಿಸುವ ಮೊದಲು ಆತ ಜೀವಂತ ಇದ್ದಾನೋ, ಮೃತಪಟ್ಟಿದ್ದಾನೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ದೆಹಲಿಯ ನ್ಯಾಯಾಲಯವೊಂದು ಹೇಳಿದೆ.
ಮೃತಪಟ್ಟ ವ್ಯಕ್ತಿಯೊಬ್ಬರ ವಿರುದ್ಧ ಸಾಲ ವಸೂಲಾತಿಗೆ ಸಲ್ಲಿಸಿದ್ದ ಅರ್ಜಿಯೊಂದನ್ನು ವಜಾಗೊಳಿಸಿದೆ.
ಸಿಯಾ ನಂದ್ ಅವರ ಬಗ್ಗೆ ಮಾಹಿತಿ ಪಡೆದು ಬರುವಂತೆ ಬ್ಯಾಂಕ್‌ಗೆ ಕೋರ್ಟ್ ಈ ಹಿಂದೆ ಸೂಚಿಸಿತ್ತು. ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಎರಡು ವರ್ಷ ಮೊದಲೇ ಸಿಯಾ ನಂದ್ ಅವರು ಮೃತಪಟ್ಟಿದ್ದಾರೆ ಎಂಬುದು ನಂತರ ಗೊತ್ತಾಯಿತು.
ನಂತರದಲ್ಲಿ ಕೋರ್ಟ್, ಬ್ಯಾಂಕ್‌ನ ಸಂಬಂಧಪಟ್ಟ ಶಾಖಾ ವ್ಯವಸ್ಥಾಪಕರಿಗೆ ತಪ್ಪು ಪ್ರಮಾಣಪತ್ರ ನೀಡಿದ್ದಕ್ಕಾಗಿ ನೋಟಿಸ್ ನೀಡಿತ್ತು. ಬ್ಯಾಂಕಿನ ಕಾನೂನು, ಸಾಲ ವಸೂಲಾತಿ ಮತ್ತು ಕೋರ್ಟ್ ಪ್ರಕರಣಗಳ ವಿಭಾಗದ ಪ್ರಧಾನ ವ್ಯವಸ್ಥಾಪಕರಿಗೆ ನೋಟಿಸ್ ಜಾರಿಗೊಳಿಸಿ, ಮೃತಪಟ್ಟ ವ್ಯಕ್ತಿಯ ವಿರುದ್ಧ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಕ್ಕೆ ಕಾರಣ ನೀಡುವಂತೆ ಹೇಳಿತ್ತು.
'ಅದಕ್ಕೆ ಪ್ರತಿಕ್ರಿಯೆಯಾಗಿ ಎಸ್‌ಬಿಐ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೋರ್ಟ್‌ಗೆ ಮಾತು ಕೊಟ್ಟಿದೆ' ಎಂದು ನವೆಂಬರ್ 2ರಂದು ನೀಡಿರುವ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
'ಯಾವುದೇ ಬ್ಯಾಂಕ್, ಅದರಲ್ಲೂ ಮುಖ್ಯವಾಗಿ ದೇಶದ ಮುಂಚೂಣಿ ಬ್ಯಾಂಕ್ ಆಗಿರುವ ಎಸ್‌ಬಿಐ ತಾನು ಯಾರ ವಿರುದ್ಧ ದಾವೆ ಹೂಡುತ್ತಿದ್ದೇನೆಯೋ ಆ ವ್ಯಕ್ತಿ ಜೀವಂತವಾಗಿ ಇದ್ದಾನೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಬೇಕು' ಎಂದು ಕೋರ್ಟ್ ಹೇಳಿದೆ.
ಶಾಖಾ ವ್ಯವಸ್ಥಾಪಕ ಸಲ್ಲಿಸಿದ ಬೇಷರತ್ ಕ್ಷಮಾಪತ್ರವನ್ನು ಒಪ್ಪಿಕೊಂಡ ಕೋರ್ಟ್, ಅವರಿಗೆ ನೀಡಿದ್ದ ನೋಟಿಸ್ ಹಿಂಪಡೆದಿದೆ. 'ಮುಂಚೂಣಿ ಬ್ಯಾಂಕ್ ಆಗಿರುವ ಎಸ್‌ಬಿಐ, ದೇಶದ ಬ್ಯಾಂಕಿಂಗ್ ಉದ್ಯಮದ ಪಾಲಿಗೆ ವೃತ್ತಿಪರತೆ, ದಕ್ಷತೆ, ಪಾರದರ್ಶಕತೆ ಮತ್ತು ನೈತಿಕತೆಯ ವಿಚಾರದಲ್ಲಿ ದಿಗ್ದರ್ಶಕನಂತೆ ಇರಬೇಕು' ಎಂದು ಕೋರ್ಟ್ ಕಿವಿಮಾತು ಹೇಳಿದೆ. ಮೃತಪಟ್ಟಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗದು ಎಂದು ಅರ್ಜಿಯನ್ನು ತಿರಸ್ಕರಿಸಲಾಗಿದೆ.