ಬದಿಯಡ್ಕ: ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆ ಶುಕ್ರವಾರ ಬದಿಯಡ್ಕದಲ್ಲಿ ಜರಗಿತು. ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಸದಸ್ಯ ಬೆಳೆಗಾರರು ಉದ್ಘಾಟಿಸಿದರು. ಹಿರಿಯ ವಕೀಲ, ಕೃಷಿಕ ಐ.ವಿ. ಭಟ್ ಕಾಸರಗೋಡು, ವಿಷ್ಣು ಭಟ್ ಕೋರಿಕ್ಕಾರು, ಕುಮಾರನ್ ನಾಯರ್, ಸುಜಾತ ರೈ, ಕೃಷ್ಣಕುಮಾರ್ ಜೊತೆಗೂಡಿ ದೀಪಬೆಳಗಿಸಿದರು.
ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಬೆಳೆಗಾರ ಸದಸ್ಯರ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದರು. ಅನಧಿಕೃತ ಅಡಿಕೆ ಆಮದಿನ ವಿಚಾರದ ಕುರಿತು ಸರ್ಕಾರವನ್ನು ಎಚ್ಚರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕೊಕ್ಕೋ ಬೆಳೆಯನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಗಿಡಗಳನ್ನು ನೀಡಲಾಗಿದೆ. ಅಡಿಕೆ, ಕೊಕ್ಕೋ ಹಾಗೂ ಕೃಷಿ ಉತ್ಪನ್ನಗಳ ಧಾರಣೆಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಶ್ರಮವಹಿಸುತ್ತಿದೆ. ಒಟ್ಟಿನಲ್ಲಿ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಸಂಸ್ಥೆಯು ಬದ್ಧವಾಗಿದೆ ಎಂದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣಕುಮಾರ್ ಮಾತನಾಡಿ ಭವಿಷ್ಯದ ಚಿಂತನೆಯಿಂದ ಸಹಕಾರಿ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗೆ ನಾವು ಹೊಂದಿಕೊಂಡು ಮುಂದುವರಿಯುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಕ್ಯಾಂಪ್ಕೋ ಸಂಸ್ಥೆಯು ಈ ನಿಟ್ಟಿನಲ್ಲಿ ಮುಂದಡಿಯಿಡುತ್ತಾ ಸಾಗುತ್ತಿದೆ ಎಂದರು. ಕ್ಯಾಂಪ್ಕೋ ಮಹಾ ಪ್ರಬಂಧಕಿ ರೇಶ್ಮಾ ಮಲ್ಯ ಸದಸ್ಯರಿಗೆ ಕ್ಯಾಂಪ್ಕೋದಿಂದ ಲಭಿಸುವ ವಿವಿಧ ಆರೋಗ್ಯ ಸವಲತ್ತುಗಳ ಮಾಹಿತಿಯನ್ನು ನೀಡಿದರು. ಡಿಜಿಟಲೀಕರಣದ ಭಾಗವಾಗಿ ಮಾಹಿತಿ ಸಂಗ್ರಹದ ಅಗತ್ಯವಿದ್ದ ಕಾರಣ ಸದಸ್ಯರು ಖಾತೆಯ ವೈಯಕ್ತಿಕ ಮಾಹಿತಿಗಳನ್ನು ನೀಡಿ ಸಹಕರಿಸಬೇಕೆಂದು ವಿನಂತಿಸಿದರು.
ಕ್ಯಾಂಪ್ಕೋ ನಿರ್ದೇಶಕರುಗಳಾದ ಎಸ್. ಆರ್. ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ ಮಡ್ತಿಲ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಎಂ. ಮಹೇಶ ಚೌಟ, ರಾಘವೇಂದ್ರ ಭಟ್, ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ರಾಧಾಕೃಷ್ಣನ್ ಕೆ., ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ., ಕ್ಯಾಂಪ್ಕೋ ಮಾರುಕಟ್ಟೆ ವಿಭಾಗದ ಅಧಿಕಾರಿ ಗೋವಿಂದ ಭಟ್, ಕ್ಯಾಂಪ್ಕೋ ಕೃಷಿ ಅಧಿಕಾರಿ ಕೃಷ್ಣ, ಪ್ರಾಂತೀಯ ಪ್ರಬಂಧಕ ಗಿರೀಶ್ ಕಾನತ್ತೂರು, ವಿವಿಧ ಶಾಖೆಗಳ ಪ್ರಬಂಧಕರು ಪಾಲ್ಗೊಂಡಿದ್ದರು. ಬದಿಯಡ್ಕ ಶಾಖಾ ಪ್ರಬಂಧಕ ದಿನೇಶ್ ಕುಮಾರ್ ನಿರೂಪಿಸಿದರು. ಚಂದ್ರಶೇಖರ ಪ್ರಾರ್ಥನೆ ಹಾಡಿದರು. ಕೃಷಿಕರು ಹೆಚ್ಚಿನಸಂಖ್ಯೆಯಲ್ಲಿ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಪ್ರಶ್ನೆ, ಅನಿಸಿಕೆಗಳನ್ನು ಸಭೆಯಲ್ಲಿ ತಿಳಿಸಿದರು. ನಿರ್ದೇಶಕ ಪದ್ಮರಾಜ ಪಟ್ಟಾಜೆ ಸ್ವಾಗತಿಸಿ, ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ವಂದಿಸಿದರು.