HEALTH TIPS

ಮಧ್ಯಪ್ರದೇಶ ಚುನಾವಣೆ: 'ಶಿಥಿಲ' ಕೋಟೆಯಲ್ಲಿ 'ಪ್ರಾಬಲ್ಯ' ಉಳಿಸಿಕೊಳ್ಳಲು ಕಸರತ್ತು

                ಗ್ವಾಲಿಯರ್‌ : ಕೋಟೆ ನಾಡು ಗ್ವಾಲಿಯರ್‌ನಲ್ಲಿ ಪ್ರಾಬಲ್ಯ ಸ್ಥಾಪಿಸಲು ಕೈ-ಕಮಲ ನಡುವೆ ಪೈಪೋಟಿ ಜೋರಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಬೆಂಬಲಿಗರ ವಲಸೆಯಿಂದ ಶಿಥಿಲಗೊಂಡಿರುವ 'ಕೈ' ಕೋಟೆಯನ್ನು ಪುಡಿಗಟ್ಟಲು ಕಮಲ ಪಡೆ ಕಸರತ್ತು ನಡೆಸುತ್ತಿದೆ.

              'ಆಪರೇಷನ್‌ ಕಮಲ', ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಾಳಯ ಮತದಾರರ ಮನ ಗೆಲ್ಲುವ ಪ್ರಯತ್ನದಲ್ಲಿ ತೊಡಗಿದೆ.

               ಬಿಜೆಪಿ ಆಡಳಿತ ಕುರಿತು ಈ ಭಾಗದ ಮತದಾರರಿಗೆ ದೊಡ್ಡ ಮಟ್ಟದ ಸಿಟ್ಟಿದೆ. ಕಾಂಗ್ರೆಸ್‌ನ ಬಗ್ಗೆಯೂ ಅವರಿಗೆ ಅಷ್ಟೊಂದು ಸಮಾಧಾನ ಇಲ್ಲ. ಗ್ವಾಲಿಯರ್‌ ರೈಲು ನಿಲ್ದಾಣದಲ್ಲಿ ಮಾತಿಗೆ ಸಿಕ್ಕ ಆಟೊ ಚಾಲಕ ಬ್ರಿಜೇಶ್‌, 'ಅಕ್ಟೋಬರ್‌ 25ರಂದು ನಡೆದ ಸಿಂಧಿಯಾ ಶಾಲೆಯ 125ನೇ ಸಂಸ್ಥಾಪನಾ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮುಖ್ಯ ಅತಿಥಿ. ಪ್ರಧಾನಿ ಅವರು ಸುಮಾರು ಅರ್ಧಗಂಟೆಯಷ್ಟು ಭಾಷಣ ಮಾಡಿದರು. ಸಿಂಧಿಯಾ ಕುಟುಂಬವನ್ನು ಹೊಗಳಲು ಬಹುತೇಕ ಸಮಯ ಮೀಸಲಿಟ್ಟರು. ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಗುಜರಾತಿನ ಅಳಿಯ ಎಂದೂ ಕರೆದರು. ಆದರೆ, ಗ್ವಾಲಿಯರ್‌ನ ಅಭಿವೃದ್ಧಿ ಬಗ್ಗೆ ಚಕಾರ ಎತ್ತಲಿಲ್ಲ' ಎಂದು ಆಕ್ಷೇಪಿಸಿದರು.

'ಗ್ವಾಲಿಯರ್‌ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಆಪರೇಷನ್‌ ಕಮಲದ ಮೂಲಕ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಸೆಳೆದುಕೊಂಡು ಮೋದಿ ಹಾಗೂ ಅಮಿತ್‌ ಶಾ ಜೋಡಿ 'ಕೈ' ಕೋಟೆಯಲ್ಲಿ ಬಿರುಕು ಮೂಡಿಸಿದರು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಳೆದ 10 ದಿನಗಳಲ್ಲಿ ಮೋದಿ ಹಾಗೂ ಶಾ ಅವರು ನಗರಕ್ಕೆ ಮೂರು ಸಲ ಬಂದು ಹೋದರು. ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿದರು. ಆದರೆ, ಜನರ ಸಂಕಷ್ಟಗಳ ಕುರಿತು ಮಾತನಾಡಲಿಲ್ಲ' ಎಂದೂ ಅವರು ಆಕ್ರೋಶ ತೋರಿದರು. 'ಗ್ವಾಲಿಯರ್ ಸುತ್ತಮುತ್ತ ದೊಡ್ಡ ಕೈಗಾರಿಕೆಗಳಿಲ್ಲ. 20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಬಿಜೆಪಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ಎಷ್ಟೊಂದು ಯುವಕರು ಕೆಲಸವಿಲ್ಲದೆ ಓಡಾಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲವೂ ನಿಮಗೆ ಗೊತ್ತಾಗುತ್ತದೆ' ಎಂದೂ ಹೇಳಿದರು.

                'ಎಲ್‌ಇಡಿ ದೀಪಗಳನ್ನು ಹಾಕುವುದು ಹಾಗೂ ಸೆಲ್ಫಿ ಸ್ಟ್ಯಾಂಡ್‌ಗಳನ್ನು ಅಳವಡಿಸುವುದನ್ನೇ ಬಿಜೆಪಿಯವರು ಅಭಿವೃದ್ಧಿ ಎಂದುಕೊಂಡಿದ್ದಾರೆ. ನಗರದ ಎಷ್ಟೊಂದು ಕಡೆ ಸೆಲ್ಫಿ ಸ್ಟ್ಯಾಂಡ್‌ಗಳಿವೆ ಎಂಬುದನ್ನು ನೀವೇ ಒಂದು ಸಲ ಲೆಕ್ಕ ಹಾಕಿ' ಎಂದು ಹೇಳಿದರು. 'ನೀವು ಕಾಂಗ್ರೆಸ್‌ನವರಾ' ಎಂದು ಪ್ರಶ್ನಿಸಿದರೆ, 'ದಿನದ ಸಂಪಾದನೆ ₹500 ದಾಟುವುದಿಲ್ಲ. ಕಷ್ಟದಲ್ಲೇ ಜೀವನ ನಡೆಸುತ್ತಿದ್ದೇನೆ. ಪಕ್ಷದಲ್ಲಿ ಗುರುತಿಸಿಕೊಂಡು ನನ್ನ ಕಷ್ಟ ಪರಿಹಾರ ಆಗುತ್ತದೆಯೇ? ವಾಸ್ತವ ಸಂಗತಿ ಹೇಳಿದ್ದೇನೆ' ಎಂದು ಸಮಜಾಯಿಷಿ ನೀಡಿದರು.

              'ನಾನು ಬಿಜೆಪಿಯವನು' ಎಂದೇ ಮಾತು ಆರಂಭಿಸಿದವರು ಕಾರು ಚಾಲಕ ರವಿ ಪಾಠಕ್‌. 'ನಗರವು ಅಭಿವೃದ್ಧಿಯಲ್ಲಿ 25 ವರ್ಷಗಳಷ್ಟು ಹಿಂದುಳಿದಿದೆ. ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿವೆ. ಬಿಜೆಪಿ ಸರ್ಕಾರವೂ ನಗರದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಜನರು ಈ ಸಲ ಪರಿವರ್ತನೆ ಬಯಸಿದ್ದಾರೆ' ಎಂದು ಹೇಳಿಕೊಂಡರು.

'           ರಾಜ-ಮಹಾರಾಜರು ಯಾವಾಗಲೂ ಅವಕಾಶವಾದಿಗಳು. ಗಾಳಿ ಬಂದ ಕಡೆಗೆ ತೂರಿಕೊಳ್ಳುವವರು. ಅಧಿಕಾರ ಇಲ್ಲದಿದ್ದರೆ ವಿಲಿವಿಲಿ ಒದ್ದಾಡುತ್ತಾರೆ. ಸಿಂಧಿಯಾ ಕುಟುಂಬ ಸಹ ಅದಕ್ಕಿಂತ ಭಿನ್ನವಲ್ಲ. 50 ವರ್ಷಗಳಿಂದ ಅಪ್ಪ-ಮಕ್ಕಳು (ಮಾಧವರಾವ್‌ ಸಿಂಧಿಯಾ, ಜ್ಯೋತಿರಾದಿತ್ಯ ಸಿಂಧಿಯಾ) ಅಧಿಕಾರದ ಸುಖ ಅನುಭವಿಸಿಕೊಂಡು ಬಂದವರು. ಅಧಿಕಾರದ ಆಸೆಯಿಂದ ಬಿಜೆಪಿಗೆ ಓಡೋಡಿ ಬಂದರು. ಆದರೆ, ಅವರ ವರ್ತನೆ ಬಿಜೆಪಿಗೆ ಹೊಂದುವುದಿಲ್ಲ' ಎಂದೂ ಅವರು ಹೇಳಿದರು. ಅದಕ್ಕೆ ಒಂದು ಉದಾಹರಣೆ ಕೊಟ್ಟರು. 'ವೇದಿಕೆಗಳಲ್ಲಿ ಜ್ಯೋತಿರಾದಿತ್ಯ ದರ್ಪ ತೋರುತ್ತಾರೆ. ರಾಜ-ಮಹಾರಾಜದ ಶೈಲಿಯಲ್ಲೇ ಭಾಷಣ ಮಾಡುತ್ತಾರೆ. ಭಾಷಣ ಮುಗಿದ ಕೂಡಲೇ ಮೈಕ್ರೋಫೋನ್ ಕಿತ್ತೆಸೆಯುತ್ತಾರೆ. ಇದು ಬಿಜೆಪಿ ಸಂಸ್ಕೃತಿಯಲ್ಲ. ಇಂತಹ ನಾಯಕರನ್ನು ಸೇರಿಸಿಕೊಂಡು ಬಿಜೆಪಿ ವರಿಷ್ಠರು ತಪ್ಪು ಮಾಡಿದ್ದಾರೆ. ಇದಕ್ಕೆಲ್ಲ ಬಿಜೆಪಿ ಈ ಸಲ ಬೆಲೆ ತೆರಲಿದೆ' ಎಂದೂ ಅವರು ಅಭಿಪ್ರಾಯಪಟ್ಟರು.

                ನಗರದ ರಸಗೊಬ್ಬರ ಅಂಗಡಿಯ ಸಮೀಪದಲ್ಲಿ ಮಾತಿಗೆ ಸಿಕ್ಕ ಸುನೀಲ್‌ ದಂದೋಟಿಯಾ, 'ನಗರದಲ್ಲಿ 50 ವರ್ಷಗಳಷ್ಟು ಹಳೆಯದಾದ ಜವಳಿ ಮಿಲ್ ಇದೆ. ಈ ಮಿಲ್‌ ಸಾವಿರಾರು ಜನರಿಗೆ ಉದ್ಯೋಗ ನೀಡಿತ್ತು. ಮಿಲ್‌ ಸ್ಥಗಿತಗೊಂಡು ಕೆಲವು ವರ್ಷಗಳು ಕಳೆದಿವೆ. ಕೆಲವು ಎಕರೆ ಜಾಗದಲ್ಲಿ ಕಟ್ಟಡ ಪಳೆಯುಳಿಕೆಯಂತೆ ಈಗಲೂ ಇದೆ. ಮಿಲ್‌ ‍ಪುನರುಜ್ಜೀವನಕ್ಕೆ ಕೆಲವು ಕೋಟಿ ಸಾಕು. ಜನರಿಗೆ ಉದ್ಯೋಗ ಸಿಗುತ್ತಿತ್ತು. ಆದರೆ, ಆ ಕೆಲಸ ಆಗಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು. 'ಸಿಂಧಿಯಾ ಪಕ್ಷಾಂತರ ಮಾಡಿ ತಪ್ಪು ಮಾಡಿದ್ದಾರೆ. ಸ್ವಲ್ಪ ಕಾಯಬೇಕಿತ್ತು. ಕಾಂಗ್ರೆಸ್‌ನಲ್ಲೇ ಮುಖ್ಯಮಂತ್ರಿ ಆಗಬಹುದಿತ್ತು' ಎಂಬುದು ಅವರ ಅನಿಸಿಕೆ.

                  ಗ್ವಾಲಿಯರ್‌-ಚಂಬಲ್‌ ಭಾಗದಲ್ಲಿ 34 ವಿಧಾನಸಭಾ ಕ್ಷೇತ್ರಗಳಿವೆ. ಈ ಭಾಗದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪ್ರಭಾವಿ ನಾಯಕ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 28 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಸಿಂಧಿಯಾ ನೇತೃತ್ವದಲ್ಲಿ 22 ಕಾಂಗ್ರೆಸ್ ಶಾಸಕರು 2020ರಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿ ಕಮಲನಾಥ್‌ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಸಿಂಧಿಯಾ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಅಸ್ಸಾಂ ಮಾದರಿಯಲ್ಲೇ ಮಧ್ಯಪ್ರದೇಶದಲ್ಲಿ ಬಿಜೆಪಿ ಪ್ರಯೋಗ ನಡೆಸಲಿದೆ ಎಂಬ ನಂಬಿಕೆಯಲ್ಲಿ ಸಿಂಧಿಯಾ ಹಾಗೂ ಬೆಂಬಲಿಗರು ಇದ್ದರು. ಬಿಜೆಪಿಯಲ್ಲಿ ಒಂದು ಡಜನ್‌ನಷ್ಟು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಹೀಗಾಗಿ, ಬಿಜೆಪಿ ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.

                 ಜತೆಗೆ, ಸಿಂಧಿಯಾ ಅವರ ಏಳು ಬೆಂಬಲಿಗರಿಗೂ ಟಿಕೆಟ್‌ ನಿರಾಕರಿಸಿ 'ಸಂದೇಶ' ರವಾನಿಸಿದೆ. ಈ ಬೆಳವಣಿಗೆಯಿಂದ ಜ್ಯೋತಿರಾದಿತ್ಯ ಜತೆ ಮುನಿಸಿಕೊಂಡಿರುವ ಕೆಲವು ಬೆಂಬಲಿಗರು 'ಕೈ' ಪಾಳಯಕ್ಕೆ ಮರಳಿದ್ದಾರೆ. ಇನ್ನೊಂದೆಡೆ, ಈ ಭಾಗದಲ್ಲಿ ಕಾಂಗ್ರೆಸ್‌ಗೆ ಪ್ರಭಾವಿ ನಾಯಕರಿಲ್ಲ. ಸಾಲು ಸಾಲು ನಾಯಕರ ವಲಸೆಯಿಂದ 'ಕೈ' ಪಾಳಯ ನಿಸ್ತೇಜಗೊಂಡಿದೆ. ಆಡಳಿತ ವಿರೋಧಿ ಅಲೆಯೇ ಪಕ್ಷವನ್ನು ಗೆಲುವಿನ ದಡ ಮುಟ್ಟಿಸಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ನಾಯಕರು ಇದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries