ಕಾಸರಗೋಡು: ಕಣ್ಣೂರು-ಕೊಡಗು ಗಡಿ ಪ್ರದೇಶ ಬಿರುನಾಣಿ ಬಳಿ ನಕ್ಸಲರ ಗುಂಡಿನ ಚಕಮಕಿ ಹಿನ್ನೆಲೆಯಲ್ಲಿ ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಯ ಮಲೆನಾಡು ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಜಾಗ್ರತಾ ನಿರ್ದೇಶ ನೀಡಿದ್ದಾರೆ.
ನಕ್ಸಲ್ ನಿಗ್ರಹ ಪಡೆ ಥಂಡರ್ ಬೋಲ್ಟ್ ಮತ್ತು ನಕ್ಸಲರ ಮಧ್ಯೆ ಬೀರುನಾಣಿಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭ ಒಬ್ಬ ನಕ್ಸಲ್ ಗಾಯಗೊಂಡಿದ್ದರೆ, ಈತನ ಜತೆಗಿದ್ದ ಆಂಧ್ರ ಮೂಲದ ಲತಾ ಹಾಗೂ ತಮಿಳ್ನಾಡಿನ ವನಜಾಕ್ಷಿ ಎಂಬವರು ಅಲ್ಲಿಂದ ಪರಾರಿಯಾಗಿದ್ದು, ರೈಲಿನಲ್ಲಿ ಸಂಚರಿಸುವ ಸಾಧ್ಯತೆಯಿರುವುದಾಗಿ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ಕೇರಳದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ ನಿಗಾವಹಿಸಲಾಗುತ್ತಿದೆ. ಈಗಾಗಲೇ ಕಣ್ಣೂರು ಜಿಲ್ಲೆಯಲ್ಲಿ ಪೊಲೀಸರು ಹೈ ಅಲಟ್ ಗೊಷಿಸಿದ್ದಾರೆ. ಪರಾರಿಯಾಗಿರುವ ನಕಜ್ಸಲರು ಕಬಿನಿ ದಳದವರಾಗಿದ್ದು, ದಳದ ಮುಖ್ಯಸ್ಥ ಮುಂಬೈ ಮೂಲದ ಮೊಯ್ದೀನ್ ಎಂಬಾತನ ನೇತೃತ್ವದಲ್ಲಿ ಕಣ್ಣೂರು-ಕೊಡಗು ಪ್ರದೇಶದಲ್ಲಿ ನಕ್ಸಲರು ಕಾರ್ಯಾಚರಿಸುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ನಿಟ್ಟಿನಲ್ಲಿ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ಪಡೆ ಕಣ್ಣೂರು ದಟ್ಟಾರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನೂ ಚುರುಕುಗೊಳಿಸಿದೆ. ಹೆಚ್ಚಿನ ಪೊಲೀಸ್ ಪಡೆಯನ್ನೂ ಈ ಪ್ರದೇಶದಲ್ಲಿ ನಿಯೋಜಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಯನಾಡ್, ಕೋಯಿಕ್ಕೋಡಿನಲ್ಲೂ ನಕ್ಸಲರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಗೊಳಿಸಲಾರಂಭಿಸಿದ್ದಾರೆ.