ಕಾಸರಗೋಡು: ಅನ್ನ ಬ್ರಹ್ಮನ ಉಪಾಸನೆ ಎಂದರೆ ಅದು ಶ್ರೀಕೃಷ್ಣನ ಆರಾಧನೆಗೆ ಸಮಾನ ಎಂಬುದಾಗಿ ಉಡುಪಿ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಂಗಳವಾರ ನಗರದ ಎಸ್.ವಿ.ಟಿ.ರಸ್ತೆಯ ಈಶಾವಾಸ್ಯಂ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಹಸಿದವರಿಗೆ ಶುಚಿ-ರುಚಿಯ ಭೋಜನ ಉಣಬಡಿಸುವುದು ಕೂಡ ದೇವರ ಸೇವೆಯೇ ಆಗಿದೆ. ಬದುಕಿಗಾಗಿ ಹಿಡಿದ ಕಾಯಕದಲ್ಲಿ ಯಶಸ್ಸು ಕಾಣುವುದು ಮೋಕ್ಷಕ್ಕೆ ಸಮಾನ ಎಂದವರು ನುಡಿದರು.
ಹಿರಿಯ ಧಾರ್ಮಿಕ ಮುಂದಾಳು, ಹೋಟೆಲ್ ಉದ್ಯಮಿ ರಾಮಪ್ರಸಾದ್ ಕಾಸರಗೋಡು ಮತ್ತು ಮನೆಮಂದಿ ವತಿಯಿಂದ ಕಾರ್ಯಕ್ರಮ ನಡೆಯಿತು. ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆದುವು.