HEALTH TIPS

ರಕ್ಷಣಾ ಕ್ಷೇತ್ರದಲ್ಲಿ ಭಾರತ ಬಲಿಷ್ಠ: ಮೋದಿ

                ಲೆಪ್ಚಾ : 'ರಕ್ಷಣಾ ವಲಯದಲ್ಲಿ ಭಾರತವು ಜಾಗತಿಕ ಬಲಿಷ್ಠ ರಾಷ್ಟ್ರವಾಗಿ ವೇಗದಲ್ಲಿ ಹೊರಹೊಮ್ಮುತ್ತಿದೆ ಮತ್ತು ರಾಷ್ಟ್ರದ ಭದ್ರತಾ ಪಡೆಗಳ ಸಾಮರ್ಥ್ಯ ನಿ‌ರಂತರ ಹೆಚ್ಚುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ಹೇಳಿದರು.

                 ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸರ (ಐಟಿಬಿಪಿ) ಸಮವಸ್ತ್ರ ಧರಿಸಿದ್ದ ಮೋದಿ ಅವರು ಗಡಿಯಲ್ಲಿ ಭದ್ರತಾ ಪಡೆಗಳ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ, ಯೋಧರಿಗೆ ಸಿಹಿ ತಿನಿಸಿದರು.

                  ನಂತರ ಇಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಒಂದು ಕಾಲದಲ್ಲಿ ನಾವು ಸಣ್ಣ ವಿಷಯಗಳಿಗೆ ಇತರರ ಮೇಲೆ ಅವಲಂಬಿತರಾಗಿದ್ದೆವು. ಆದರೆ, ಈಗ ನಾವು ನಮ್ಮ ಮಿತ್ರ ರಾಷ್ಟ್ರಗಳ ಅಗತ್ಯಗಳನ್ನು ಪೂರೈಸುತ್ತಿದ್ದೇವೆ' ಎಂದು ಬಣ್ಣಿಸಿದರು.

                'ವಿಶ್ವದ ಸದ್ಯದ ಸನ್ನಿವೇಶಗಳಲ್ಲಿ ದೇಶದ ನಿರೀಕ್ಷೆಗಳು ನಿರಂತರ ಹೆಚ್ಚುತ್ತಲೇ ಇವೆ. ಇಂತಹ ಮಹತ್ವದ ಸಮಯದಲ್ಲಿ, ದೇಶದ ಗಡಿಗಳನ್ನು ರಕ್ಷಣೆ ಮಾಡುವುದು ಅವಶ್ಯ. ದೇಶದಲ್ಲಿ ಶಾಂತಿಯ ವಾತಾವರಣವಿದೆ. ಇದರಲ್ಲಿ ನಿಮ್ಮ(ಯೋಧರ) ಪಾತ್ರ ದೊಡ್ಡದು. ದೇಶವು ತನ್ನ ಸಂಪೂರ್ಣ ಬಲದಿಂದ ಅಭಿವೃದ್ಧಿಯ ಉತ್ತುಂಗಕ್ಕೇರುತ್ತಿದ್ದರೆ ಅದರ ಶ್ರೇಯಸ್ಸು ನಿಮ್ಮ ಸಾಮರ್ಥ್ಯ, ಸಂಕಲ್ಪ ಮತ್ತು ತ್ಯಾಗಕ್ಕೆ ಸಲ್ಲುತ್ತದೆ. ನಮ್ಮ ಭದ್ರತಾ ಪಡೆಗಳು ಮತ್ತು ಯೋಧರ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದು ಪ್ರಶಂಸಿಸಿದರು.

                  'ಹಿಮಾಲಯದಂತಹ ಗಡಿಗಳಲ್ಲಿ ನಮ್ಮ ಕೆಚ್ಚೆದೆಯ ಯೋಧರು ನಿಂತಿರುವುದರಿಂದ ಭಾರತವನ್ನು ರಕ್ಷಿಸಲಾಗಿದೆ‌. ವೀರ ಸೇನಾನಿಗಳು ಗಡಿಯಲ್ಲಿ ಇರುವವರೆಗೂ ದೇಶ ಸುರಕ್ಷಿತ. ಸ್ವಾತಂತ್ರ್ಯದ ನಂತರ, ಈ ಧೈರ್ಯಶಾಲಿಗಳು (ಸೇನಾ ಸಿಬ್ಬಂದಿ) ಹಲವು ಯುದ್ಧಗಳನ್ನು ಜಯಿಸಿ, ದೇಶದ ಜನತೆಯ ಹೃದಯವನ್ನು ಗೆದ್ದಿದ್ದಾರೆ. ನಮ್ಮ ಯೋಧರು ಎಲ್ಲ ಸವಾಲುಗಳನ್ನು ಮೆಟ್ಟಿ, ವಿಜಯಯವನ್ನು ತಂದುಕೊಟ್ಟಿದ್ದಾರೆ' ಎಂದು ಮೋದಿ ಶ್ಲಾಘಿಸಿದರು.

               'ಪರಿವಾರ ಇರುವಲ್ಲಿ ಪರ್ವ ಎನ್ನುವ ಮಾತಿದೆ. ಹಬ್ಬಗಳಂದು ಕುಟುಂಬ, ಪ್ರೀತಿಪಾತ್ರರಿಂದ ದೂರವಿದ್ದು ಗಡಿಗಳಲ್ಲಿ ಕಾವಲು ಕಾಯುವುದು ಕರ್ತವ್ಯ ಬದ್ಧತೆಗೆ ಉದಾಹರಣೆ. ದೇಶವು ಸೈನಿಕರಿಗೆ ಸದಾ ಋಣಿಯಾಗಿದೆ. ಆದ್ದರಿಂದ, ದೀಪಾವಳಿಯಂದು, ಜನರು ನಿಮ್ಮ ಸುರಕ್ಷತೆಯನ್ನು ಬಯಸಿ ಪ್ರಾರ್ಥಿಸುತ್ತಾರೆ' ಎಂದು ಹೇಳಿದರು.

                 'ಸೈನಿಕರು ಯಾವಾಗಲೂ ತಮ್ಮ ಪ್ರಾಣ ಪಣಕ್ಕಿಟ್ಟು ಮುನ್ನಡೆದಿದ್ದಾರೆ. ಗಡಿಯಲ್ಲಿ ಅವರು ಅಚಲವಾದ ಗೋಡೆ ಎಂಬುದನ್ನು ಸದಾ ಸಾಬೀತುಪಡಿಸಿದ್ದಾರೆ. ನಮ್ಮ ಭದ್ರತಾ ಪಡೆಗಳ ಕರ್ತವ್ಯ ನಿಯೋಜಿತ ಸ್ಥಳವು ನನಗೆ ದೇವಸ್ಥಾನಕ್ಕಿಂತ ಕಡಿಮೆಯಿಲ್ಲ. ನಾನು ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಿ ಅಷ್ಟೇ ಅಲ್ಲ, ಕಳೆದ 30-35 ವರ್ಷಗಳಿಂದಲೂ ದೀಪಾವಳಿಯನ್ನು ಯೋಧರೊಂದಿಗೆ ಆಚರಿಸಿಕೊಂಡು ಬಂದಿದ್ದೇನೆ' ಎಂದು ತಿಳಿಸಿದರು.

               ಮೋದಿ ಅವರು ಕಳೆದ ವರ್ಷ ದೀಪಾವಳಿಯನ್ನು ಕಾರ್ಗಿಲ್‌ನಲ್ಲಿ ಶಸಸ್ತ್ರ ಪಡೆಗಳ ಯೋಧರೊಂದಿಗೆ ಆಚರಿಸಿದ್ದರು.

'                                    ವರ್ಷದಲ್ಲಿ ಅಭೂತಪೂರ್ವ ಸಾಧನೆ'

                    ಕಳೆದ ದೀಪಾವಳಿಯಿಂದ ಈ ನಡುವಿನ ಅವಧಿಯಲ್ಲಿ ದೇಶವು ಅಭೂತಪೂರ್ವ ಸಾಧನೆಗಳನ್ನು ಮಾಡಿದೆ ಎಂದು ಮೋದಿ ಹೇಳಿದರು. 2016ರ ದೀಪಾವಳಿಯ ಅವಧಿಗೆ ಹೋಲಿಸಿದರೆ ಈಗ ಭಾರತದ ರಕ್ಷಣಾ ಸಾಮಗ್ರಿಗಳ ರಫ್ತು ಎಂಟು ಪಟ್ಟು ಹೆಚ್ಚಾಗಿದೆ. ದೇಶೀಯ ರಕ್ಷಣಾ ಉತ್ಪಾದನೆ ಈಗ ₹1 ಲಕ್ಷ ಕೋಟಿಗೆ ತಲುಪಿದೆ ಎಂದು ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ 500ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳಿಗೆ ಸೇನೆಯಲ್ಲಿ ಕಾಯಂ ಸೇವೆಯ ಅವಕಾಶ ಕಲ್ಪಿಸಲಾಗಿದೆ ಎಂದು ಮೋದಿ ಇದೇ ವೇಳೆ ತಿಳಿಸಿದರು. ಚಂದ್ರಯಾನ 3 ಆದಿತ್ಯ ಎಲ್‌1 ಉಡಾವಣೆ ಏಷ್ಯನ್‌ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ 100ಕ್ಕೂ ಹೆಚ್ಚು ಪದಕಗಳ ಬೇಟೆ ಸಂಸತ್ತಿನ ಹೊಸ ಕಟ್ಟಡ ಲೋಕಾರ್ಪಣೆ ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರ ಜಿ 20 ಶೃಂಗ ಯಶಸ್ವಿ ಆಯೋಜನೆ ಹಾಗೂ ಜಿಡಿಪಿಯಲ್ಲಿ ವಿಶ್ವದ ಐದನೇ ಅತಿ ದೊಡ್ಡ ರಾಷ್ಟ್ರವಾಗಿ ಭಾರತವು ಬೆಳೆದಿರುವ ಸಾಧನೆಯನ್ನು ಮೋದಿ ಪಟ್ಟಿ ಮಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries