ಜೈಪುರ: ಜಾತಿ ಗಣತಿ ದೇಶದ 'ಎಕ್ಸ್-ರೇ' ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು ಎಂದು ಮಂಗಳವಾರ ಹೇಳಿದ್ದಾರೆ.
ಮಂಗಳವಾರ ರಾಜಸ್ಥಾನದ ಉದಯಪುರದ ವಲ್ಲಭನಗರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜಸ್ಥಾನದಲ್ಲಿ ಜಾತಿ ಗಣತಿ ನಡೆಸಲಿದೆ ಮತ್ತು ನಮ್ಮ ಪಕ್ಷ ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ರಾಷ್ಟ್ರ ಮಟ್ಟದಲ್ಲಿಯೂ ಜಾತಿ ಗಣತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜಾತಿ ಸಮೀಕ್ಷೆ, ರೈತರಿಗೆ 2 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಮತ್ತು 10 ಲಕ್ಷ ಉದ್ಯೋಗಾವಕಾಶಗಳು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ಬಿಹಾರದಲ್ಲಿ ನಡೆಸಿದ ಜಾತಿ ಗಣತಿ ರೀತಿಯಲ್ಲೇ ರಾಜಸ್ಥಾನದಲ್ಲೂ ಜಾತಿ ಸಮೀಕ್ಷೆ ನಡೆಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಹಿಂದೆ ಹೇಳಿದ್ದರು.
ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಈ ಹಿಂದೆ ಪ್ರಧಾನಿ ತಾನು ಒಬಿಸಿ ಎಂದು ಹೇಳುತ್ತಿದ್ದರು. ಆದರೆ ತಾವು ಜಾತಿ ಗಣತಿಗೆ ಬೇಡಿಕೆ ಎತ್ತಿದಾಗ, ಮೋದಿ ಭಾರತದಲ್ಲಿ ಒಂದೇ ಜಾತಿ ಎಂದು ಹೇಳಲು ಪ್ರಾರಂಭಿಸಿದ್ದಾರೆ ಎಂದರು.