ತಿರುವನಂತಪುರಂ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಂಡಲ-ಮಕರ ಜ್ಯೋತಿ ಭಕ್ತಾದಿಗಳ ತೀರ್ಥಾಟನೆ ಆರಂಭಗೊಳ್ಳುತ್ತಿದ್ದಂತೆ ದೇಗುಲದ ಆಸುಪಾಸು ರಕ್ಷಣಾ ಕಾರ್ಯ ಮತ್ತಷ್ಟು ಬಿಗುಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ದೇಶದ ಕೆಲವೆಡೆ ನಡೆಯುತ್ತಿರುವ ಭಯೋತ್ಪಾದನೆ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಈ ವರದಿ ಸಲ್ಲಿಸಲಾಗಿದೆ. ಭಯೋತ್ಪಾದಕರು ಹಾಗೂ ನಕ್ಸಲರು ಭಕ್ತಾದಿಗಳ ಸೋಗಿನಲ್ಲಿ ದೇವಾಲಯಕ್ಕೆ ಆಗಮಿಸುವ ಸಾಧ್ಯತೆ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇರುಮುಡಿ ಕಟ್ಟಿನ ಮರೆಯಲ್ಲಿ ಸ್ಪೋಟಕ ವಸ್ತು ಸಾಗಾಟದ ಭೀತಿಯನ್ನೂ ವ್ಯಕ್ತಪಡಿಸಲಾಗಿದೆ. ಸಂಶಯ ಕಂಡುಬಂದಲ್ಲಿ ಆಚಾರಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಭಕ್ತಾದಿಗಳನ್ನು ತಪಾಸಣೆಗೊಳಪಡಿಸುವ ಬಗ್ಗೆಯೂ ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಕಳಮಶ್ಯೇರಿಯ ಕ್ರೈಸ್ತ ಪ್ರಾರ್ಥನಾ ಕೇಂದ್ರದಲ್ಲಿ ಬಾಂಬ್ ಸ್ಪೋಟ, ಕಣ್ಣೂರು, ಕೋಯಿಕ್ಕೋಡ್, ವಯನಾಡ್ ಜಿಲ್ಲೆಗಳಲ್ಲಿ ನಕ್ಸಲ್ ವಿರುದ್ಧ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಪೊಲೀಸ್ ಬಂದೋಬಸ್ತ್ ಬಿಗುಗೊಳಿಸಲು ಈಗಾಗಲೇ ಸೂಚನೆ ನಿಡಲಾಗಿದೆ. ಸನ್ನಿಧಾನ ಆಸುಪಾಸು ಅಗ್ನಿಅನಾಹುತ ಭೀತಿಯ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು, ಸನ್ನಿದಾನ ಆಸುಪಾಸು ಹೋಟೆಲ್‍ಗಳು ಅನಧಿಕೃತವಾಗಿ ಅಡುಗೆಅನಿಲ ಸಿಲಿಂಡರ್ ದಾಸ್ತಾನಿರಿಸುವುದಕ್ಕೂ ನಿಯಂತ್ರಣ ಹೇರಲಾಗಿದ್ದು, ದೇವಸ್ವಂ ಬೋರ್ಡ್ ಮೂಲಕವೆ ಸಿಲಿಂಡರ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆಯೂ ವರದಿಯಲ್ಲಿ ತಿಳಿಸಲಾಗಿದೆ.
ಮುಂದಿನ ದಿನಗಳಲ್ಲಿ ಸನ್ನಿದಾನದಲ್ಲಿ ಜನದಟ್ಟಣೆ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು, ಪಂಪೆಯಿಂದ ಸನ್ನಿಧಾನಕ್ಕೆ ಸಾಮಗ್ರಿ ಸಾಗಿಸಲು ರೋಪ್‍ವೇ ವಯವಸ್ಥೆ ಬಳಸಬೇಕು, ತುರ್ತು ಕಾರ್ಯಾಚರಣೆಗೆ ಸನ್ನಿಧಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಬೇಕು, ಭಕ್ತಾದಿಗಳ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸನ್ನಿಧಾನದಲ್ಲಿ ಹೆಚ್ಚಿನ ಸ್ಥಳಾವಕಾಶ ಮಾಡಿಕೊಡಬೇಕು ಮುಂತಾದ ಶಿಫಾರಸು ಮಾಡಲಾಗಿದೆ.
ಶಬರಿಮಲೆಯಲ್ಲಿ ನ. 16ರಂದು ಮಂಡಲ ಪೂಜೆಗಾಗಿ ಗರ್ಭಗುಡಿ ಬಾಗಿಲು ತೆರೆಯಲಾಗಿದ್ದು, ಡಿ. 27ರಂದು ಮಂಡಲ ಪೂಜಾ ಮಹೋತ್ಸವ ನಡೆಯಲಿದ್ದು, ಅಂದು ರಾತ್ರಿ 10ಕ್ಕೆ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಮಕರಜ್ಯೋತಿ ಪೂಜೆಗಾಗಿ ಡಿ. 30ರಂದು ಸಂಜೆ 5ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ಈ ಬಾರಿ ಜ. 15ರಂದು ಮಕರಜ್ಯೋತಿ ದರ್ಶನವಾಗಲಿದೆ.