ನವದೆಹಲಿ: ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪರಮಾಪ್ತ ಹಾಗೂ ಮಾಜಿ ಐಎಎಸ್ ಅಧಿಕಾರಿ ವಿ.ಕಾರ್ತಿಕೇಯನ್ ಪಾಂಡಿಯನ್ ಅವರು ಆಡಳಿತಾರೂಢ ಬಿಜು ಜನತಾ ದಳಕ್ಕೆ (ಬಿಜೆಡಿ) ಸೋಮವಾರ ಅಧಿಕೃತವಾಗಿ ಸೇರ್ಪಡೆಯಾದರು.
ನವದೆಹಲಿ: ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪರಮಾಪ್ತ ಹಾಗೂ ಮಾಜಿ ಐಎಎಸ್ ಅಧಿಕಾರಿ ವಿ.ಕಾರ್ತಿಕೇಯನ್ ಪಾಂಡಿಯನ್ ಅವರು ಆಡಳಿತಾರೂಢ ಬಿಜು ಜನತಾ ದಳಕ್ಕೆ (ಬಿಜೆಡಿ) ಸೋಮವಾರ ಅಧಿಕೃತವಾಗಿ ಸೇರ್ಪಡೆಯಾದರು.
ಪಾಂಡಿಯನ್ ಅವರು ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ಹಿರಿಯ ನಾಯಕರ ಸಮ್ಮುಖದಲ್ಲಿ ಪಟ್ನಾಯಕ್ ಅವರ ಭುವನೇಶ್ವರದ ನಿವಾಸದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಸೇರ್ಪಡೆಗೊಂಡರು.
'ಪಾಂಡಿಯನ್ ಅವರು ಹಲವಾರು ವರ್ಷಗಳಿಂದ ರಾಜ್ಯಕ್ಕಾಗಿ ತುಂಬಾ ಶ್ರಮಿಸುತ್ತಿದ್ದಾರೆ ಮತ್ತು ಅದನ್ನು ಮುಂದುವರಿಸಲಿದ್ದಾರೆ. ಅವರು ಜನರ ಗೌರವ ಗಳಿಸಿದ್ದಾರೆ. ನಾನು ಅವರಿಗೆ ಶುಭ ಹಾರೈಸುತ್ತೇನೆ' ಎಂದು ನವೀನ್ ಪಟ್ನಾಯಕ್ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
49 ವರ್ಷದ ಪಾಂಡಿಯನ್ ಅವರು 2000ನೇ ಸಾಲಿನ ಐಎಎಸ್ ಅಧಿಕಾರಿ. ಒಡಿಶಾದಲ್ಲಿ ಅವರು ಸುದೀರ್ಘ ಅವಧಿ ಕಾರ್ಯನಿರ್ವಹಿಸಿದ್ದಾರೆ. ತಮಿಳುನಾಡು ಮೂಲದವರಾದ ಅವರು, 12 ವರ್ಷಗಳ ಕಾಲ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯಾಗಿದ್ದರು. ಈ ವರ್ಷದ ಅಕ್ಟೋಬರ್ 23ರಂದು ಸ್ವಯಂನಿವೃತ್ತಿ ಪಡೆದಿದ್ದರು. ಆಡಳಿತ ವಿಚಾರದಲ್ಲಿ ಪಟ್ನಾಯಕ್ ಅವರಿಗೆ ಕಣ್ಣು-ಕಿವಿ ಎಲ್ಲವೂ ಪಾಂಡಿಯನ್ ಆಗಿದ್ದಾರೆ.
ಸ್ವಯಂನಿವೃತ್ತಿ ಪಡೆದ ಬೆನ್ನಲ್ಲೇ ಪಾಂಡಿಯನ್ ಅವರನ್ನು ರಾಜ್ಯದ ಪ್ರಮುಖ 5 ಟಿ (ಪರಿವರ್ತನೆಯ ಉಪಕ್ರಮ) ಮತ್ತು ನವೀನ್ (ಹೊಸ) ಒಡಿಶಾ ಯೋಜನೆಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಕ್ಯಾಬಿನೆಟ್ ದರ್ಜೆಯ ಸಚಿವರ ಸ್ಥಾನಮಾನ ಹೊಂದಿರುವ ಹುದ್ದೆ ಇದು. ರಾಜಕೀಯಕ್ಕೆ ಸೇರುವ ಮೊದಲು, ಪಾಂಡಿಯನ್ ಅವರು ರಾಜ್ಯದ ಎಲ್ಲ 30 ಜಿಲ್ಲೆಗಳಿಗೆ ಭೇಟಿ ನೀಡಿದ್ದರು ಮತ್ತು ಜನರ ಕುಂದುಕೊರತೆಗಳನ್ನು ಆಲಿಸಿದ್ದರು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿದ್ದರು.