ನೋಯ್ಡಾ: ಪೊಲೀಸ್ ಸಮವಸ್ತ್ರದಲ್ಲಿ ಜಾತಿವಾದವನ್ನು ಬಿಂಬಿಸುವ ಹಾಡಿನ ವಿಡಿಯೊ ಮಾಡಿದ್ದ ನೋಯ್ಡಾ ಸೆಕ್ಟರ್ 126 ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿಯ ಮೇಲೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ನೋಯ್ಡಾ: ಪೊಲೀಸ್ ಸಮವಸ್ತ್ರದಲ್ಲಿ ಜಾತಿವಾದವನ್ನು ಬಿಂಬಿಸುವ ಹಾಡಿನ ವಿಡಿಯೊ ಮಾಡಿದ್ದ ನೋಯ್ಡಾ ಸೆಕ್ಟರ್ 126 ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿಯ ಮೇಲೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ನಿಯಮ ಉಲ್ಲಂಘನೆ ಆರೋಪದ ಮೇಲೆ ಪ್ರಭಾರ ಠಾಣಾಧಿಕಾರಿ ಅಜಯ್ ಸಿಂಗ್ ಚಹಾರ್ ಎನ್ನುವರನ್ನು ಬೇರೆಡೆ ವರ್ಗಾವಣೆ ಮಾಡಿರುವ ನೋಯ್ಡಾ ಪೊಲೀಸ್ ಆಯುಕ್ತ ಆನಂದ ಕುಲಕರ್ಣಿ, ಇಲಾಖೆ ವಿಚಾರಣೆಗೆ ಆದೇಶಿಸಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಜಾತಿವಾದವನ್ನು ಬಿಂಬಿಸುವ ಐದು ನಿಮಿಷದ ವಿಡಿಯೊವನ್ನು ಅಜಯ್ ಸಿಂಗ್ ಮಾಡಿದ್ದರು. ಪೊಲೀಸ್ ಸಮವಸ್ತ್ರದಲ್ಲಿ ಹೊರಗಿನ ನಾಲ್ವರು ಯುವಕರ ಜೊತೆ 'ಬಿಲ್ಡ್‌ಅಪ್ ಸಾಂಗ್' ಮಾಡಿದ್ದರು. ಅಲ್ಲದೇ ನಿರ್ಧಿಷ್ಟ ಜಾತಿ ಒಂದರ ಬಗ್ಗೆ ಕೀಳಾಗಿ ಹಾಡಲಾಗಿತ್ತು.
ಅಲ್ಲದೇ ವಿಡಿಯೊವನ್ನು ಯುಟ್ಯೂಬ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ವಿವಾದವಾದ ಮೇಲೆ ಆ ವಿಡಿಯೊವನ್ನು ಅಳಿಸಿ ಹಾಕಲಾಗಿದೆ.
ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸಿ ಯಾವುದೇ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂಬ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಜಾರಿ ಮಾಡಿದೆ.