ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆಯ ಯೋಧನೊಬ್ಬ ತನ್ನ ಬಳಿಯಿದ್ದ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚುನಾವಣಾ ಕರ್ತವ್ಯಕ್ಕಾಗಿ ಕಾಟೇಕಲ್ಯಾಣ ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿದ್ದ ಬಿಎಸ್‌ಎಫ್‌ನ 70ನೇ ಬೆಟಾಲಿಯನ್ ತಂಡ ಶೋಧ ಕಾರ್ಯಾಚರಣೆ ಆರಂಭಿಸಲು ಮುಂದಾದಾಗ ಈ ಸ್ಫೋಟ ಸಂಭವಿಸಿದೆ ಎಂದು ದಾಂತೇವಾಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೆಟ್ರೋಲಿಂಗ್ ತಂಡ, ಪೊಲೀಸ್ ಠಾಣೆ ಆವರಣದಿಂದ ಹೊರಗೆ ಹೋಗುತ್ತಿದ್ದಾಗ ಹೆಡ್ ಕಾನ್‌ಸ್ಟೆಬಲ್ ಬಲ್ಬೀರ್ ಚಂದ್ ಅವರು ಧರಿಸಿದ್ದ ಪೌಚ್‌ನಲ್ಲಿದ್ದ ಹ್ಯಾಂಡ್ ಗ್ರೆನೇಡ್ ಸ್ಫೋಟಗೊಂಡಿದೆ ಎಂದು ಅವರು ಹೇಳಿದ್ದಾರೆ.
ಸ್ಫೋಟದಲ್ಲಿ ಚಾಂದ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ದಾಂತೇವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಚಂದ್ ಹಿಮಾಚಲ ಪ್ರದೇಶದ ನಿವಾಸಿಯಾಗಿದ್ದು, ಘಟನೆಯ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ದಾಂತೇವಾಡ ಸೇರಿದಂತೆ ಛತ್ತೀಸ್‌ಗಢದ 20 ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 7 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.