ನವದೆಹಲಿ: ಪಶ್ಚಿಮ ಏಷ್ಯಾದ ಬೆಳಗವಣಿಗೆಗಳು ಮತ್ತು ಇಸ್ರೇಲ್- ಹಮಾಸ್ ನಡುವಣ ಕದನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಶುಕ್ರವಾರ ದೂರವಾಣಿ ಚರ್ಚೆ ಮಾಡಿದ್ದಾರೆ. ಅಲ್ಲಿನ ಭದ್ರತಾ ಪರಿಸ್ಥಿತಿ ಹಾಗೂ ನಾಗರಿಕರ ಜೀವಹಾನಿಯಾಗುತ್ತಿರುವ ಬಗ್ಗೆ ಉಭಯ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
'ಉಭಯ ನಾಯಕರು ಭಯೋತ್ಪಾದನೆ, ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಹಾಗೂ ನಾಗರಿಕರ ಜೀವಹಾನಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕ ಶಾಂತಿ, ಭದ್ರತೆ, ನಿರಂತರ ಹಾಗೂ ಸ್ಥಿರ ಮಾನವೀಯ ನೆರವು ನೀಡುವ ಬಗ್ಗೆ ಉಭಯ ನಾಯಕರು ವ್ಯಕ್ತಪಡಿಸಿದರು' ಎಂದು ಪ್ರಧಾನಮಂತ್ರಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದ್ದಾಗಿ ಸುನಕ್ ಅವರಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, 'ಈ ದಿನ ಯುಕೆ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಮಾತನಾಡಿದೆ. ದ್ವಿಪಕ್ಷೀಯ ಸಂಬಂಧ ಬಲವರ್ಧನೆ ಕುರಿತು ಹಾಗೂ ಪಶ್ಚಿಮ ಏಷ್ಯಾದ ಪರಿಸ್ಥಿತಿ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡೆವು. ಭಯೋತ್ಪಾದನೆ ಹಾಗೂ ಹಿಂಸೆಗೆ ಜಾಗವಿರಬಾರದು ಎನ್ನುವುದನ್ನು ನಾವು ಒಪ್ಪಿಕೊಂಡೆವು. ನಾಗರಿಕರ ಸಾವು ತೀವ್ರ ಕಳವಳಕಾರಿಯಾದುದು. ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರ ಹಾಗೂ ನಿರಂತರ ಮಾನವೀಯ ನೆರವು ನೀಡುವ ಬಗ್ಗೆ ಕಾರ್ಯಪ್ರವೃತವಾಗಬೇಕಿದೆ' ಎಂದು ಹೇಳಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ, ಬಂಡವಾಳ, ತಂತ್ರಜ್ಞಾನ, ರಕ್ಷಣೆ, ಭದ್ರತೆ, ಆರೋಗ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಂಬಂಧ ವೃದ್ಧಿಯ ಬಗ್ಗೆ ಮಾತುಕತೆ ನಡೆಯಿತು. ಉಭಯ ನಾಯಕರು ದೀಪಾವಳಿಯ ಶುಭಾಶಯ ಹಂಚಿಕೊಂಡರು ಎಂದು ಪ್ರಕಟಣೆ ತಿಳಿಸಿದೆ.