ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ಐಸಿಸಿ 2023 ವಿಶ್ವಕಪ್ ಪಂದ್ಯದಲ್ಲಿ ಭದ್ರತಾ ಉಲ್ಲಂಘನೆಯಾಗಿದೆ. ಪ್ಯಾಲೆಸ್ತೇನ್ ಅಭಿಮಾನಿಯೋರ್ವ ಬಿಗಿ ಭದ್ರತೆಯ ನಡುವೆಯೂ ಕ್ರಿಕೆಟ್ ಮೈದಾನಕ್ಕೆ ನುಗ್ಗಿ ಕೊಹ್ಲಿಯತ್ತ ಧಾವಿಸಿದ ಘಟನೆ ವರದಿಯಾಗಿದೆ.
ಮೊದಲ ವಿರಾಮಕ್ಕೂ ಮುನ್ನ ಈ ಆತಂಕಕಾರಿ ಘಟನೆ ವರದಿಯಾಗಿದೆ. ಭದ್ರತಾ ಸಿಬ್ಬಂದಿಗಳು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಆತನನ್ನು ಚೀನಾ-ಫಿಲಿಪಿನೋ ಮೂಲದ ಆಸ್ಟ್ರೇಲಿಯಾ ವ್ಯಕ್ತಿ ವೇಯ್ನ್ ಜಾನ್ಸನ್ ಎಂದು ಗುರುತಿಸಲಾಗಿದೆ.
ವೇಯ್ನ್ ಜಾನ್ಸನ್ ನ್ನು ಬಂಧಿಸಿ ಚಾಂದ್ ಖೇಡಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಕ್ರಿಕೆಟ್ ಆಟಗಳಲ್ಲಿ ರಾಜಕೀಯ ಘೋಷಣೆಗಳು ಅಪರಾಧವಾಗಿದೆ ಆದರೆ ಜಾನ್ಸನ್ ವಿದೇಶಿ ಪ್ರಜೆಯಾಗಿರುವುದರಿಂದ ಅವರ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂಬುದು ಇನ್ನೂ ತಿಳಿದಿಲ್ಲ.
ಜಾನ್ಸನ್ ಪ್ಯಾಲೆಸ್ತೀನ್ ಧ್ವಜದ ವಿನ್ಯಾಸದ ಮಾಸ್ಕ್ ಮತ್ತು ಎರಡೂ ಬದಿಗಳಲ್ಲಿ ಸ್ಲೋಗನ್‌ಗಳನ್ನು ಹೊಂದಿದ್ದ ಟಿ-ಶರ್ಟ್ ನ್ನು ಧರಿಸಿದ್ದರು. ಟೀ-ಶರ್ಟ್‌ನ ಮುಂಭಾಗದಲ್ಲಿ, 'ಪ್ಯಾಲೆಸ್ಟೈನ್ ಬಾಂಬ್ ಸ್ಫೋಟವನ್ನು ನಿಲ್ಲಿಸಿ' ಎಂದು ಮತ್ತು ಹಿಂಭಾಗದಲ್ಲಿ, 'ಪ್ಯಾಲೆಸ್ತೀನ್ ಉಳಿಸಿ' ಎಂದು ಬರೆಯಲಾಗಿತ್ತು. ಆತ ಹಠಾತ್ ಒಳನುಗ್ಗಿದ್ದು, ಭದ್ರತಾ ಸಿಬ್ಬಂದಿಗಳು ಆತನನ್ನು ತ್ವರಿತವಾಗಿ ಬಂಧಿಸಿದ್ದಾರೆ.
ಐಸಿಸಿ ತನ್ನ ಈವೆಂಟ್‌ನಲ್ಲಿ ಯಾವುದೇ ರಾಜಕೀಯ ಘೋಷಣೆಗಳನ್ನು ಅನುಮತಿಸುವುದಿಲ್ಲ ಮತ್ತು ಅಂತಹ ಯಾವುದೇ ಕಾರ್ಯವನ್ನು ಭಾರತದಲ್ಲಿ ಸಹ ಅನುಮತಿಸಲಾಗುವುದಿಲ್ಲ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಉಗ್ರಗಾಮಿ ಗುಂಪು ಹಮಾಸ್ ಅಕ್ಟೋಬರ್ 7 ರಿಂದ ಯುದ್ಧದಲ್ಲಿ ತೊಡಗಿಸಿಕೊಂಡಿದೆ, ಹಮಾಸ್ ಕಿಬ್ಬುಟ್ಜ್ ರೀಮ್‌ನಲ್ಲಿ ಸಂಗೀತ ಉತ್ಸವದ ಮೇಲೆ ದಾಳಿ ಮಾಡಿತ್ತು.