ಉತ್ತರಕಾಶಿ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಜತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ ಅವರಲ್ಲಿ ಧೈರ್ಯ ತುಂಬಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ನೇರವಾಗಿ ಸುರಂಗದಲ್ಲಿ ಸಿಲುಕಿಕೊಂಡಿರುವ 41 ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದಾರೆ.
'ಸತತ 12 ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅಂತಿಮ ಹಂತ ತಲುಪಿದೆ. ಶೀಘ್ರವಾಗಿ ಹಾಗೂ ಸುರಕ್ಷಿತವಾಗಿ ಹೊರ ಬರುತ್ತೀರಿ ಎಂದು ಧಾಮಿ ಕಾರ್ಮಿಕರಿಗೆ ಭರವಸೆ' ನೀಡಿದ್ದಾರೆ.
' ಕಾರ್ಮಿಕರನ್ನು ಹೊರತರಲು ಕೊರೆಯುತ್ತಿರುವ ಮಾರ್ಗವು ಸುಮಾರು 45 ಮೀಟರ್ ಕ್ರಮಿಸಿದ್ದು, ಇನ್ನೂ ಕೆಲವೇ ಮೀಟರ್‌ನಷ್ಟು ದೂರದಲ್ಲಿದ್ದೇವೆ' ಎಂದು ಧಾಮಿ ಕಾರ್ಮಿಕರಲ್ಲಿ ವಿಶ್ವಾಸ ಮೂಡಿಸಿದ್ದಾರೆ.
'ಸುರಂಗದಲ್ಲಿ ನಿಲುಕಿಕೊಂಡಿರುವ ಗಬ್ಬರ್ ಸಿಂಗ್ ಮತ್ತು ಸಬಾ ಅಹ್ಮದ್ ಅವರೊಂದಿಗೆ ಮುಖ್ಯಮಂತ್ರಿ ಧಾಮಿ ಮಾತನಾಡಿ, ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಕೇಳಿದರು. ನಂತರ ಇಷ್ಟು ದಿನಗಳ ಕಾಲ ಸುರಂಗದಲ್ಲಿ ಧೈರ್ಯದಿಂದ ಇರುವ ಕಾರ್ಮಿಕರನ್ನು' ಶ್ಲಾಘಿಸಿದ್ದಾರೆ.
ಇಂಟರ್‌ನ್ಯಾಷನಲ್ ಟನೆಲಿಂಗ್ ಅಂಡರ್‌ಗ್ರೌಂಡ್ ಸ್ಪೇಸ್‌ನ ಪ್ರಾಧ್ಯಾಪಕ ಅರ್ನಾಲ್ಡ್ ಡಿಕ್ಸ್ ಅವರು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರತರುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿತ್ಯವೂ ಇಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕಾರ್ಮಿಕರ ಕುಟುಂಬದ ಜತೆಯೂ ಸರ್ಕಾರ ನಿರಂತರ ಸಂಪರ್ಕದಲ್ಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಚಾರ್‌ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಿಸುತ್ತಿರುವ ಸುರಂಗದ ಕೆಲಭಾಗಗಳು ಕಳೆದ ಭಾನುವಾರ (ನ.12) ಕುಸಿದೆ.